ಶಿರಸಿ: ಜೂ. 9ರಂದು ಜಮ್ಮು-ಕಾಶ್ಮೀರದಲ್ಲಿ ವೈಷ್ಣೋದೇವಿ ಕತ್ರಾದಿಂದ ಸಂಚರಿಸುತ್ತಿದ್ದ ಹಿಂದೂ ಭಕ್ತರ ಬಸ್ಸಿನ ಮೇಲೆ ಪಾಕಿಸ್ತಾನ ಪೋಷಿತ ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಹತ್ತು ಹಿಂದೂ ಯಾತ್ರಿಕರು ಮರಣ ಹೊಂದಿರುವುದನ್ನು ಖಂಡಿಸಿ ಬುಧವಾರ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮುಖೇನ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನಗರದ ರಾಘವೇಂದ್ರ ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ನಂತರ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಶವ್ ಮರಾಠೆ ಅವರು, ಭಯೋತ್ಪಾದಕರ ಈ ಕ್ರೂರ ಕೃತ್ಯದಿಂದ ಸಂಪೂರ್ಣ ದೇಶ ಆಘಾತಗೊಂಡಿದೆ. ಅಲ್ಲದೆ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆಯಿಂದ ಇನ್ನೂ ಮುಕ್ತವಾಗಿಲ್ಲ. 370 ವಿಧಿಯನ್ನು ರದ್ದುಪಡಿಸಿದ ನಂತರ ಒಂದು ಆಶಾದೀಪ ಬೆಳಗಿತ್ತು. ಆದರೆ ಉಗ್ರ ಅಟ್ಟಹಾಸ ಇನ್ನೂ ಕಡಿಮೆಯಾಗಿಲ್ಲ. ಹಿಂದೂಗಳನ್ನು ಗುರುತಿಸಿ ಅವರ ಹತ್ಯೆಗೀಡು ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದರಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ಸ್ಪಷ್ಟವಾಗಿದೆ. ದೇಶದ ಹೊಸ ಸರ್ಕಾರದ ಪ್ರಮಾಣವಚನದ ಸಮಯದಲ್ಲಿ ಇಂಥ ಹೇಯ ಕೃತ್ಯವನ್ನು ಮಾಡಿ ಇಸ್ಲಾಮಿಕ್ ಭಯೋತ್ಪಾದಕರು ದೇಶದ ಸ್ವಾಯತ್ತತೆಗೆ ಸವಾಲನ್ನು ನೀಡಿದಂತಾಗಿದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಗಂಗಾಧರ್ ಹೆಗಡೆ ಅವರು, ಈ ರೀತಿಯ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಕೃತ್ಯಗಳಿಗೆ ಸಿಲುಕಿರುವ ಹಿಂದುಗಳಿಗೆ ರಕ್ಷಣೆಯನ್ನು ಮತ್ತು ಕೃತ್ಯಗಳಿಗೆ ಕಾರಣರಾದ ವಿದೇಶಿ ಶಕ್ತಿಗಳನ್ನು ಕಠಿಣವಾಗಿ ಶಿಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶವನ್ನು ನೀಡುವಂತೆ ವಿನಂತಿಸಿದರು.ಈ ಸಂದರ್ಭದಲ್ಲಿ ಅಮಿತ್ ಶೇಟ್, ನಂದನ್ ಸಾಗರ್, ಗಣಪತಿ ಭಟ್, ಶ್ರೀಕಾಂತ್ ನಾಯ್ಕ, ಶಿಲ್ಪಾ ನಾಯ್ಕ, ಮೇಘನಾ ಶಾಸ್ತ್ರಿ, ರವಿಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.