ಕನ್ನಡಪ್ರಭ ವಾರ್ತೆ ಶಿಕಾರಿಪುರ
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವೇಳೆ ಸರ್ಕಾರ ಪೊಲೀಸರಿಂದ ಲಾಠಿ ಚಾರ್ಜ್ ನಡೆಸಿದ್ದನ್ನು ಖಂಡಿಸಿ ಸಮಾಜ ಬಾಂಧವರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪಟ್ಟಣದ ಅಕ್ಕಮಹಾದೇವಿ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ನಂತರ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ವಿವಿಧ ಬೀದಿಗಳಲ್ಲಿ ಸಾಗಿ ತಾಲೂಕು ಕಚೇರಿಯಲ್ಲಿ ಉಪ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಲಿಂಗಾಯತ ಪಂಚಮಸಾಲಿ ಜಿಲ್ಲಾ ಹೋರಾಟ 2ಎ ಮೀಸಲಾತಿ ಸಮಿತಿ ಅಧ್ಯಕ್ಷ ಡಾ.ಮಾಲತೇಶ್ ಮಾತನಾಡಿ, ಪಂಚಮಸಾಲಿ ಲಿಂಗಾಯತ ಸಮಾಜ ಮೀಸಲಾತಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಈ ಹೋರಾಟವು ಪಂಚಮಸಾಲಿ ಪ್ರಥಮ ಪೀಠ ಕೂಡಲಸಂಗಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ತೀವ್ರವಾಗಿ ಹೋರಾಟ ನಡೆಸಲಾಗುತ್ತಿದೆ. ಮೊದಲನೇ ಹಂತವಾಗಿ ಅನೇಕ ಗ್ರಾಮಗಳಲ್ಲಿ ಜಾಗೃತಿ ಶಿಬಿರ ಎರಡನೇ ಹಂತವಾಗಿ ಹೋಬಳಿ ಮಟ್ಟದಲ್ಲಿ ಮೀಸಲಾತಿ ಹೋರಾಟ ಜಾಗೃತಿ ಶಿಬಿರ, ಮೂರು ಮತ್ತು ನಾಲ್ಕನೇ ಹಂತದಲ್ಲಿ ಹೋರಾಟ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ನಡೆಸಿ, ಐದನೇ ಹಂತದ ಹೋರಾಟವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾಜದಿಂದ ಸುಮಾರು 10ಲಕ್ಷ ಸಮಾಜ ಬಾಂಧವರು ಸೇರಿ ಪ್ರತಿಭಟಿಸಲಾಯಿತು.ಆರನೇ ಹಂತದ ಹೋರಾಟವು ಪ್ರತಿ ವಿಭಾಗ ಮಟ್ಟದಲ್ಲಿ ನಡೆಸಲಾಯಿತು. ಏಳನೇ ಹಂತದ ಹೋರಾಟ ಕಳೆದ ಡಿ.10 ರಂದು ಬೆಳಗಾವಿಯ ಸುವರ್ಣಸೌಧದ ಎದುರು ಶಾಂತಿಯುತ ಹೋರಾಟ ನಡೆಸಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವ ಪ್ರಯತ್ನದಲ್ಲಿದ್ದಾಗ ಪೊಲೀಸರಿಂದ ಲಾಠಿ ಚಾರ್ಜ್ ನಡೆಸಲಾಯಿತು. ರಾಜ್ಯ ಸರ್ಕಾರದ ಈ ಧೋರಣೆಯನ್ನು ಪಂಚಮಸಾಲಿ ಸಮಾಜವು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕ್ರಮಕ್ಕಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಶಿವರಾಜ್ ಎಂ.ಎಸ್.ಮಾತನಾಡಿ, ರಾಜ್ಯದ ಎಲ್ಲ ಪಕ್ಷ, ಮುಖ್ಯಮಂತ್ರಿಗಳು ನಮ್ಮನ್ನ ವೋಟ್ ಬ್ಯಾಂಕಿನಂತೆ ಬಳಸಿಕೊಂಡು ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ವಿವೇಕಾನಂದರ ದಿವ್ಯ ವಾಣಿಯಂತೆ ಏಳಿ ಎದ್ದೇಳಿ ಸಮಾನತೆಯ ಕುರಿತು ಗುರಿ ಮುಟ್ಟುವವರೆಗೆ ಹೋರಾಡಿರಿ ಎಂಬಂತೆ ನಮ್ಮ ಸಮಾಜಕ್ಕೆ ಮೀಸಲಾತಿ ದೊರಕುವರೆಗೂ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಪಂಚ ಸೇನಾ ಅಧ್ಯಕ್ಷ ರುದ್ರಪ್ಪ ಕಣಿವೆಮನೆ, ತಾಲೂಕು ಗೌರವ ಅಧ್ಯಕ್ಷ ಸದಾಶಿವಪ್ಪ(ನಿವೃತ್ತ ಪೊಲೀಸ್ ಅಧಿಕಾರಿ) ಸಮಾಜದ ಮುಖಂಡ ರುದ್ರಮನಿ, ಸುಭಾಷ್ ಚಂದ್ರ, ಪಿ. ಮಲ್ಲೇಶ್, ನೀಲಮ್ಮ ಬಗನೆಕಟ್ಟೆ,ಗಿರಿಜಮ್ಮ ಪರಮೇಶ್ವರಪ್ಪ,ಕೆಂಗಡತೆ ಉಮಾಶಂಕರ್, ಮಲ್ಲೇಶಪ್ಪ, ಪ್ರಕಾಶ್ ಜೆಪಿ ,ವೀರೇಶ್, ಕುಮಾರ್ ನಂದಿಹಳ್ಳಿ, ನಂದಿಹಳ್ಳಿ ಗೌಡ್ರು ಸೇರಿ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.