ಹೆಣ್ಣುಭ್ರೂಣ ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Dec 15, 2023, 01:30 AM IST
ಪೊಟೋ೧೪ಸಿಪಿಟಿ೧: ರೈತ ಸಂಘದ ತಾಲೂಕು ಮಹಿಳಾ ಘಟಕದಿಂದ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರೇಡ್-೨ ತಹಸೀಲ್ದಾರ್ ಲಕ್ಷ್ಮೀದೇವಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಖಂಡಿಸಿ ಹಾಗೂ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಮಹಿಳಾ ಘಟಕದಿಂದ ತಾಲೂಕು ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಗುರುವಾರ ನಗರದ ಗಾಂಧಿ ಭವನದ ಮುಂದೆ ಜಮಾಯಿಸಿದ ರೈತ ಸಂಘದ ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ತಲುಪಿ ಪ್ರತಿಭಟನೆ ನಡೆಸಿದರು. ಹೆಣ್ಣು ಭ್ರೂಣ ಹತ್ಯೆ ತಡೆಗೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತ ಸಂಘದ ತಾಲೂಕು ಮಹಿಳಾ ಘಟಕದಿಂದ ಪ್ರತಿಭಟನೆ । ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಖಂಡಿಸಿ ಹಾಗೂ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಮಹಿಳಾ ಘಟಕದಿಂದ ತಾಲೂಕು ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಗುರುವಾರ ನಗರದ ಗಾಂಧಿ ಭವನದ ಮುಂದೆ ಜಮಾಯಿಸಿದ ರೈತ ಸಂಘದ ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ತಲುಪಿ ಪ್ರತಿಭಟನೆ ನಡೆಸಿದರು. ಹೆಣ್ಣು ಭ್ರೂಣ ಹತ್ಯೆ ತಡೆಗೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಮ್ಮ ದೇಶದಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನ ನೀಡಲಾಗಿದೆ. ಹಿಂದಿನ ಕಾಲದಲ್ಲಿ ಗಂಡು ಹೆಣ್ಣಿನ ನಡುವೆ ಸಮಾನತೆ ಇರಲಿಲ್ಲ. ಆದರೆ, ಈಗ ಸಮಾಜ ಬದಲಾಗಿದ್ದು, ಹೆಣ್ಣು ಮಕ್ಕಳು ಸುಶಿಕ್ಷಿತರಾಗಿದ್ದಾರೆ. ಹೀಗಿದ್ದರೂ ಸಹ ಮಂಡ್ಯದಲ್ಲಿ ಭ್ರೂಣ ಹತ್ಯೆ ನಡೆದಿರುವುದು ಮಾನವ ಕುಲವೇ ತಲೆ ತಗ್ಗಿಸುವಂಥ ವಿಚಾರ. ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗಲ್ಲು ಶಿಕ್ಷೆ ನೀಡಿ:ಹೆಣ್ಣು ಮಕ್ಕಳ ಮೇಲೆ ಒಂದು ಕಡೆ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚಾಗುತ್ತಿದ್ದರೆ, ಇನ್ನೊಂದು ಕಡೆ ಹೆಣ್ಣು ಭ್ರೂಣ ಹತ್ಯೆಯ ಮುಖಾಂತರ ಜನ್ಮತಾಳದಂತೆ ತಡೆಯಲಾಗುತ್ತಿದೆ. ಸಮಾಜ ದೇವರ ಸ್ಥಾನದಲ್ಲಿಟ್ಟಿರುವ ವೈದ್ಯರೇ ಇಂಥ ಕೃತ್ಯದಲ್ಲಿ ತೊಡಗಿರುವುದು ದುರಂತ. ಇಂಥ ಹೀನ ಕೃತ್ಯ ನಡೆಸಿರುವ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಹೆಣ್ಣು ಭ್ರೂಣ ಹತ್ಯೆ ಎಂಬುದು ಸಮಾಜದಲ್ಲಿ ಒಂದು ಪಿಡುಗಾಗಿದ್ದು, ಸಮಾಜಕ್ಕೆ ಮಾರಕವಾಗಿದೆ. ಇದರಿಂದ ಲಿಂಗಾನುಪಾತದಲ್ಲಿ ಏರುಪೇರಾಗಿದೆ. ಭ್ರೂಣ ಲಿಂಗ ಪತ್ತೆಯನ್ನೇ ಕೆಲವರು ದಂಧೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ ನಡೆಸಿ ಇಂಥ ಪಿಡುಗುಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಗ್ಯ ಇಲಾಖೆ ತಾಲೂಕು ಹಾಗೂ ಗ್ರಾಪಂ ಮಟ್ಟದಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಕುರಿತು ಜಾಗೃತಿ ಅಭಿಯಾನ ಕೈಗೊಂಡು, ಜನರಿಗೆ ಅರಿವು ಮೂಡಿಸಲು ಕೆಲಸ ಮಾಡಬೇಕು. ಇಂಥ ಘಟನೆಗಳ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಜತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಆಗ್ರಹಿಸಿದರು.

ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರೇಡ್-೨ ತಹಸೀಲ್ದಾರ್ ಲಕ್ಷ್ಮೀದೇವಮ್ಮ ಅವರಿಗೆ ಈ ಮೂಲಕ ಮನವಿ ಸಲ್ಲಿಸಿದರು.

ರೈತ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಶಂಕರೇಗೌಡ, ರಾಮನಗರದ ಜಿಲ್ಲಾ ಕಾರ್ಯದರ್ಶಿ ರೂಪ ಹರೂರು, ತಾಲೂಕು ಅಧ್ಯಕ್ಷೆ ಬಿ.ಕೆ. ಶ್ವೇತಾ, ಗೌರವಾಧ್ಯಕ್ಷೆ ಸಾವಿತ್ರಮ್ಮ, ಕಾರ್ಯಾಧ್ಯಕ್ಷೆ ಶ್ವೇತಾ, ಪ್ರಧಾನ ಕಾರ್ಯದರ್ಶಿ ಹೇಮಾವತಿ, ಉಪಾಧ್ಯಕ್ಷೆ ಸುಶೀಲಮ್ಮ, ಸಂಘಟನಾ ಕಾರ್ಯದರ್ಶಿ ಸುಧಾ, ಖಜಾಂಚಿ ರೂಪ, ಸಹಕಾರ್ಯದರ್ಶಿ ಮೀನಾಕ್ಷಿ ಇತರರು ಇದ್ದರು.

---

ರೈತ ಸಂಘದ ತಾಲೂಕು ಮಹಿಳಾ ಘಟಕದಿಂದ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ್ ಲಕ್ಷ್ಮೀದೇವಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!