ಬಸವೇಶ್ವರ ಮೂರ್ತಿ ವಿರೂಪಗೊಳಿಸಿದ ಕಿಡಿಗೇಡಿಗಳ ಕೃತ್ಯ ಖಂಡಿಸಿ ಬೀದರ್‌ನಲ್ಲಿ ಬಸವ ಪರ ಸಂಘಟನೆಗಳಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ಬಳಿಯ ಬಸವೇಶ್ವರ ಮೂರ್ತಿ ವಿರೂಪಗೊಳಿಸಿದ ಕಿಡಿಗೇಡಿಗಳ ಕೃತ್ಯ ಖಂಡಿಸಿ ಮಂಗಳವಾರ ಬೀದರ್‌ನಲ್ಲಿ ಬಸವ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಬಸವೇಶ್ವರ ವೃತ್ತದ ಬಳಿಯಿಂದ ಪ್ರಮುಖರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೂಡಲೇ ಆರೋಪಿಗಳನ್ನು ಬಂಧಿಸ ಬೇಕೆಂದು ಆಗ್ರಹಿಸಿದರು.ಮೂರ್ತಿ ವಿರೂಪಗೊಳಿಸಿ ಬಸವೇಶ್ವರರಿಗೆ ಅವಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ, ಬಸವಗಿರಿಯ ಪೂಜ್ಯ ಬಸವಪ್ರಭುಗಳು, ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಯುವ ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಹಾರೂರಗೇರಿ ಬಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಉದ್ಯಮಿ ಜೈರಾಜ್ ಖಂಡ್ರೆ, ಶಿವಶಂಕರ ಟೋಕರೆ, ಬಸವರಾಜ ಭತ್ಮೂರ್ಗೆ, ಯೋಗೆಂದ್ರ ಯದಲಾಪೂರೆ, ಕುಶಾಲರಾವ ಪಾಟೀಲ್ ಖಾಜಾಪೂರ, ಬಾಬು ದಾನಿ, ಆದೀಶ ವಾಲಿ ಸೇರಿದಂತೆ ಸಮಾಜದ ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು.ನೂತನ ಬಸವೇಶ್ವರ ಪ್ರತಿಮೆ ಸ್ಥಾಪನೆಗೆಜಿಲ್ಲಾಡಳಿತಕ್ಕೆ ಸೂಚನೆ: ಸಚಿವ ಖಂಡ್ರೆಭಾಲ್ಕಿ: ತಾಲೂಕಿನ ದಾಡಗಿ ಕ್ರಾಸ್ ರಸ್ತೆಯಲ್ಲಿನ ವಿಶ್ವಗುರು ಬಸವಣ್ಣನವರ ಹಾನಿಯಾಗಿರುವ ಬಸವೇಶ್ವರರ ಪ್ರತಿಮೆಯ ಸ್ಥಳದಲ್ಲಿಯೇ ಹೊಸದಾಗಿ ಪ್ರತಿಮೆ ಸ್ಥಾಪಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಆದ್ದರಿಂದ ಜಿಲ್ಲೆಯ ಬಸವ ಭಕ್ತರು ಶಾಂತಿ ಕಾಪಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.ಈ ಕುರಿತು ಪ್ರಕಟಣೆ ನೀಡಿ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ರಸ್ತೆಯಲ್ಲಿನ ವಿಶ್ವಗುರು ಬಸವಣ್ಣನವರ ಪ್ರತಿಮೆ ಟ್ರಾಕ್ಟರ್ ಚಾಲಕ ನಿರ್ಲಕ್ಷ್ಯದಿಂದ ಭಗ್ನ ವಾಗಿದೆ. ಇದರಲ್ಲಿ ಯಾವುದೇ ಕಿಡಿಗೇಡಿಗಳ ಕೃತ್ಯ ಕಂಡುಬಂದಿಲ್ಲ ಎಂಬುದನ್ನು ಪೊಲೀಸ್ ಇಲಾಖೆಯ ತನಿಖೆಯಿಂದ ಗೊತ್ತಾಗಿದೆ. ಆರೋಪಿ ಚಾಲಕನನ್ನು ಈಗಾಗಲೇ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಗ್ಗೆ ನನಗೆ ಮಾಹಿತಿ ದೊರೆತ ಕೂಡಲೇ ಕ್ರಮ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.