ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ರೈತ ಸಭಾಂಗಣದ ಕುವೆಂಪು ಪ್ರತಿಮೆ ಬಳಿ ಸಮಾವೇಶಗೊಂಡ ಕಾರ್ಯಕರ್ತರು, ಕೇಂದ್ರ ಸರ್ಕಾರದ ಆರ್ಥಿಕ ಧೋರಣೆಯ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ತೆರಳಿ ಕರ್ನಾಟಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ತೆರಿಗೆ ಸಂಗ್ರಹದಲ್ಲಿ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೂ, ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ನಿರೀಕ್ಷಿತ ಅನುದಾನ ನೀಡದೆ ಅನ್ಯಾಯ ಎಸಗುತ್ತಿದೆ. ಒಂದು ರುಪಾಯಿ ತೆರಿಗೆಗೆ ಕನಿಷ್ಠ ೧೫ ಪೈಸೆಯನ್ನಾದರೂ ನೀಡಬೇಕಾದ ಕೇಂದ್ರ ಸರ್ಕಾರ, ಕೇವಲ ೩ ಪೈಸೆ ನೀಡುವುದರ ಮೂಲಕ ರಾಜ್ಯಕ್ಕೆ ದ್ರೋಹ ಎಸಗುತ್ತಿದೆ ಎಂದು ಆರೋಪಿಸಿದರು.ಕೇಂದ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ೧೬ ಸಾವಿರ ಕೋಟಿ ರು. ನೀಡಬೇಕಿದ್ದು, ಇದುವರೆಗೆ ೯ ಸಾವಿರ ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ರು. ಅನುದಾನ ನೀಡುವುದಾಗಿ ಎರಡು ವರ್ಷದ ಹಿಂದಿನ ಬಜೆಟ್‌ನಲ್ಲೇ ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೂ ಒಂದು ರುಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ೧೧ ವರ್ಷಗಳು ಕಳೆದಿದ್ದರೂ ಇದುವರೆಗೂ ಕರ್ನಾಟಕದ ಯಾವ ಮಹನೀಯರಿಗೂ ಭಾರತರತ್ನವನ್ನು ನೀಡದೆ ಸಾಂಸ್ಕೃತಿಕವಾಗಿ ಅಪಮಾನವನ್ನು ಮಾಡಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಶಿಫಾರಸ್ಸು ಮಾಡಿರುವ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನವನ್ನು ನೀಡುವುದರದ ಮೂಲಕ ಕರ್ನಾಟಕಕ್ಕೆ ಸಾಂಸ್ಕೃತಿಕ ನ್ಯಾಯವನ್ನು ನೀಡಬೇಕೆಂದು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಪ್ರೊ.ಜಿ.ಟಿ.ವೀರಪ್ಪ, ಎಚ್.ಡಿ. ಜಯರಾಂ, ಎಂ. ಕೃಷ್ಣ, ಚಂದ್ರಶೇಖರ ಆರಾಧ್ಯ, ಸುಂಡಹಳ್ಳಿ ಬಸವರಾಜು, ವೈರಮುಡಿ, ಜಯರಾಮು, ನಾರಾಯಣಸ್ವಾಮಿ, ಬೆಂಜಮಿನ್ ಥಾಮಸ್, ಹುರುಗಲವಾಡಿ ರಾಮಯ್ಯ, ಎಂ.ಎಸ್. ರಾಜಣ್ಣ, ಬಿ. ಲಿಂಗಯ್ಯ, ಎಚ್.ಪಿ. ಸತೀಶ್, ಸುದರ್ಶನ್, ಶಶಿಕುಮಾರ್, ಸಿ.ಆರ್. ರಮೇಶ, ವಿಜಯಕುಮಾರ್, ಮಹೇಶ್, ಪ್ರದೀಪ್, ಆನಂದ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.