ಐಸ್ ಕ್ರೀಂ ಘಟಕ ಸ್ಥಾಪನೆ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : May 07, 2025, 12:50 AM IST
6ಸಿಎಚ್‌ಎನ್‌2ಯಳಂದೂರು ಸಮೀಪದ ಕುದೇರು ಗ್ರಾಮದ ಚಾಮುಲ್ ಕಚೇರಿ ಆವರಣದಲ್ಲಿ ಮಂಗಳವಾರ ರೈತ ಸಂಘ ಹಾಗೂ ಹೈನುಗಾರರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿದರು. | Kannada Prabha

ಸಾರಾಂಶ

ಯಳಂದೂರು ಸಮೀಪದ ಕುದೇರು ಗ್ರಾಮದ ಚಾಮುಲ್ ಕಚೇರಿ ಆವರಣದಲ್ಲಿ ಮಂಗಳವಾರ ರೈತ ಸಂಘ ಹಾಗೂ ಹೈನುಗಾರರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರುಕುದೇರು ಗ್ರಾಮದಲ್ಲಿರುವ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಚಾಮುಲ್)ದಲ್ಲಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಐಸ್‌ಕ್ರೀಂ ಘಟಕವನ್ನು ಸ್ಥಾಪಿಸಬಾರದು ಎಂದು ರೈತ ಸಂಘದ ಸದಸ್ಯರು ಹಾಗೂ ಹೈನುಗಾರರು ಮಂಗಳವಾರ ಚಾಮುಲ್ ಬಳಿ ಪ್ರತಿಭಟನೆ ನಡೆಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಈಗಾಗಲೇ ಚಾಮುಲ್ 26 ಕೋಟಿ ಸಾಲದಲ್ಲಿದೆ. ಈಗ ಮತ್ತೆ 25 ಕೋಟಿ ರು. ಸಾಲವನ್ನು ತಂದು ಐಸ್‌ಕ್ರೀಂ ಘಟಕ ಸ್ಥಾಪಿಸಲು ಇಲ್ಲಿ ಉದ್ದೇಶಿಸಲಾಗಿದೆ. ಅಲ್ಲದೆ ಇಲ್ಲಿ ಹಾಲು ಉತ್ಪಾದನೆಯೂ ಕಡಿಮೆ ಇದೆ. ಈ ಸಂದರ್ಭದಲ್ಲಿ ಚಾಮುಲ್‌ನ್ನು ಮತ್ತೆ ನಷ್ಟದೆಡೆಗೆ ದೂಡುವ ಹುನ್ನಾರ ನಡೆಯುತ್ತಿದೆ. ನೀವು ಒಂದು ವೇಳೆ ಇದನ್ನು ಸ್ಥಾಪನೆ ಮಾಡಬೇಕೆಂಬ ದೃಢ ನಿರ್ಧಾರ ಹೊಂದಿದ್ದರೆ ಸರ್ಕಾರದಿಂದ ಚಾಮುಲ್‌ಗೆ 25 ಕೋಟಿ ರು.ಹಣ ತನ್ನಿ ನಂತರ ಇದನ್ನು ಸ್ಥಾಪಿಸಬೇಕು. ಅಲ್ಲದೆ ಇಲ್ಲಿಗೆ ಹಾಲು ಹಾಕುತ್ತಿರುವ ಹೈನುಗಾರರಿಂದ ಲೀಟರ್ ಹಾಲಿಗೆ 1 ರು. ಹಣ ಪಡೆದುಕೊಂಡು ಇಲ್ಲಿನ ನೌಕರರು ಬೋನಸ್ ಆಗಿ ಪಡೆದುಕೊಂಡಿದ್ದಾರೆ.

ಹೈನುಗಾರರಿಗೆ ಈ ಹಣವನ್ನು ನೀಡಬೇಕು. ಚಾಮುಲ್‌ನಲ್ಲಿ 400 ಕ್ಕೂ ಹೆಚ್ಚು ಮಂದಿ ನೌಕರರು ಕೆಲಸ ಮಾಡುತ್ತಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೌಕರರನ್ನು ಇಲ್ಲಿಗೆ ಸೇರಿಸಿಕೊಳ್ಳಲಾಗಿದೆ. ಅಲ್ಲದೆ ಪ್ರತಿ ತಿಂಗಳು 2 ಕೋಟಿ ರು. ಗೂ ಹೆಚ್ಚು ಹಣವನ್ನು ವೇತನವಾಗಿ ಪಾವತಿ ಮಾಡಲಾಗುತ್ತಿದೆ. ಈಗ ಐಸ್ ಕ್ರೀಂ ಘಟಕ ಸ್ಥಾಪನೆಯಾದರೆ ಮತ್ತೆ ಇದನ್ನು ಹೆಚ್ಚಿಸಿಕೊಳ್ಳುವ ಅಪಾಯವಿದೆ. ಹಾಗಾಗಿ ಚಾಮುಲ್ ಮತ್ತಷ್ಟು ನಷ್ಟಕ್ಕೆ ಹೋಗುವ ಭೀತಿ ಇದೆ. ನೌಕರರ ಪ್ರಮಾಣ ಇಳಿಸಬೇಕು. ಅಲ್ಲದೆ ಹಾಲಿನ ಜಡ್ಡಿನಂಶವನ್ನು ಈಗಿರುವ ತಂತ್ರಜ್ಞಾನದಲ್ಲಿ ಬೇಗ ನೀಡಬಹುದು. ಆದರೆ ಬೇಕೆಂತಲೇ ಇದನ್ನು ನೀಡಲು ೩ ದಿನ ತೆಗೆದುಕೊಳ್ಳಲಾಗುತ್ತಿದೆ. ಬಿಎಂಸಿ ಕೇಂದ್ರಗಳಲ್ಲಿ ಹಾಲಿಗೆ ನೀರು ಬೆರೆಸುವ ದಂಧೆ ನಡೆಯುತ್ತಿದೆ ಎಂದರು.

ಹೈನುಗಾರರಿಗೆ ಜಿಡ್ಡಿನಾಂಶ ಕಡಿಮೆ ಬಂದರೆ ಬೆಲೆ ಕಡಿಮೆಯಾಗುವುದರಿಂದ ನಷ್ಟವಾಗುತ್ತದೆ. ತಕ್ಷಣ ಈ ಪರೀಕ್ಷೆಯನ್ನು ಅಲ್ಲೇ ನಡೆಸಿ ದರ ನಿಗದಿ ಮಾಡಬೇಕು. ಈ ಎಲ್ಲಾ ವಿಷಯಗಳನ್ನಿಟ್ಟುಕೊಂಡು ಮೇ 27 ರಂದು ನಾವು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ಮಾಹಿತಿ ನೀಡಿದರು.ಚಾಮುಲ್‌ನ ವ್ಯವಸ್ಥಾಪಕ ನಿರ್ದೇಶಕರ ರಾಜ್‌ಕುಮಾರ್ ಮಾತನಾಡಿ, ಹಾಲಿನ ಜಿಡ್ಡಿನ ಅಂಶವನ್ನು ಶೀಘ್ರ ಪತ್ತೆ ಮಾಡಲು ಹೊಸ ಆ್ಯಪ್ ಬಿಡುಗಡೆ ಮಾಡಲಾಗುವುದು. ಜೂನ್ ವೇಳೆಗೆ ಇದನ್ನು ಅಳವಡಿಸಲಾಗುವುದು. ಇದರಿಂದ ಹೈನುಗಾರಿಗೆ ಶೀಘ್ರದಲ್ಲೇ ಜಿಡ್ಡಿನ ಅಂಶ ಪತ್ತೆ ಮಾಡಲು ಸಹಾಯವಾಗುತ್ತದೆ. ಪ್ರತಿ ಉತ್ಪಾಕದರಿಗೂ ಹೊಸ ಆ್ಯಪ್ ಮೂಲಕ ತಮ್ಮ ಮೊಬೈಲ್‌ನಲ್ಲೇ ತಾವು ಪೂರೈಸಿರುವ ಹಾಲಿನ ಸಂಪೂರ್ಣ ಡೇಟಾ ಪಡೆದುಕೊಳ್ಳಬಹುದು. ಮುಂದಿನ ತಿಂಗಳಿಂದ ಇದು ಜಾರಿಗೆ ಬರಲಿದೆ. ನಮ್ಮಲ್ಲಿ ನೌಕರರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಇದರ ಬಗ್ಗೆ ಕೆಲವರು ಮಾಹಿತಿಯನ್ನು ಕೇಳಿದ್ದು ಶೀಘ್ರದಲ್ಲೇ ಮಾಹಿತಿ ಕೊಡಲಾಗುವುದು ಎಂದರು.ಈ ಸಂದರ್ಭದಲ್ಲಿ ಮಾಡ್ರಳ್ಳಿ ಪಾಪಣ್ಣ, ಲೋಕೇಶ್, ಉಮ್ಮತ್ತೂರು ಬಸವರಾಜು, ಅಂಬಳೆ ಶಿವಕುಮಾರ್, ಭೀಮನಬೀಡು ರಾಜ, ಹನೂರು ಜಗದೀಶ್, ಶ್ರೀನಿವಾಸರೆಡ್ಡಿ, ವಿರೇಶ್, ಕುದೇರು ಫಣೀಂದ್ರ, ಕೋಡಿಮೋಳೆ ಶಿವರುದ್ರಸ್ವಾಮಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು