ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಮೈಸೂರು ರಸ್ತೆಯಲ್ಲಿರುವ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮೇ 5ರಂದು ನಡೆದ ಕೆಎಎಸ್ ನೇಮಕಾತಿ ಪ್ರಬಂಧ ಪತ್ರಿಕೆ ಪರೀಕ್ಷೆ ವೇಳೆ ಯಾವುದೇ ಲೋಪವಾಗಿಲ್ಲ ಎಂದಿರುವ ಕೆಪಿಎಸ್‌ಸಿ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳನ್ನು ಅಲ್ಲಗಳೆದಿದೆ.ಈ ಕುರಿತು ಸೋಮವಾರ ತಡರಾತ್ರಿ ಪತ್ರಿಕಾ ಪ್ರಕಟಣೆ ನೀಡಿರುವ ಕೆಪಿಎಸ್ಸಿ, ಸೋರಿಕೆ ವಿಷಯದ ಕುರಿತು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಪರೀಕ್ಷಾ ಉಪಕೇಂದ್ರದ ಮೇಲ್ವಿಚಾರಕರು ಮತ್ತು ಆಯೋಗದಿಂದ ನಿಯೋಜಿತ ಸ್ಥಳೀಯ ನಿರೀಕ್ಷಣಾಧಿಕಾರಿಗಳಿಂದ ವಿಸ್ತೃತ ವರದಿಗಳನ್ನು ಪಡೆಯಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಮತ್ತು ಅಕ್ರಮಗಳನ್ನು ತಡೆಯಲು ಕೆಪಿಎಸ್‌ಸಿ ಅನೇಕ ಕ್ರಮಗಳನ್ನು ಕೈಗೊಂಡಿದೆ.
ಈ ಪರೀಕ್ಷೆಯಲ್ಲೂ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಮೊಹರು ಮಾಡಿದ ಪೆಟ್ಟಿಗೆ, ಮೊಹರು ಮಾಡಿದ ಲೋಹದ ಟ್ರಂಕ್, ಮೊಹರು ಮಾಡಿದ ಟ್ಯಾಂಪರ್ ಎವಿಡೆಂಟ್ ಕವರ್‌ಗಳ ಒಳಗೆ ಪ್ರಶ್ನೆಪತ್ರಿಕೆಗಳನ್ನು ಇಡುವಂಥ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಈಗ ಆರೋಪ ಕೇಳಿ ಬಂದಿರುವ ಪರೀಕ್ಷಾ ಕೇಂದ್ರದಲ್ಲಿ ವಿತರಿಸಿರುವ ಪ್ರಶ್ನೆ ಪತ್ರಿಕೆಗಳಿದ್ದ ಪೆಟ್ಟಿಗೆಗಳು, ಟ್ರಂಕ್‌ಗಳು ಮತ್ತು ಟ್ಯಾಂಪರ್ ಎವಿಡೆಂಟ್ ಕವರ್‌ಗಳಲ್ಲಿನ ಎಲ್ಲಾ ಭದ್ರತಾ ಮೊಹರುಗಳು ಕ್ರಮಬದ್ಧವಾಗಿಯೇ ಇರುವುದು ಕಂಡು ಬಂದಿದೆ. ಇದನ್ನು ಅಭ್ಯರ್ಥಿಗಳು, ಉಪ ಕೇಂದ್ರದ ಮೇಲ್ವಿಚಾರಕರು, ಸ್ಥಳೀಯ ನಿರೀಕ್ಷಣಾಧಿಕಾರಿಗಳು ಮತ್ತು ಕೊಠಡಿ ಸಂವೀಕ್ಷಕರು ಖಚಿತಪಡಿಸಿದ್ದಾರೆ.ಪ್ರಶ್ನೆಪತ್ರಿಕೆಗಳ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಅವುಗಳನ್ನು ಬಹುಪದರಗಳು ಇರುವ ಪ್ಯಾಕ್‌ನಲ್ಲಿರಿಸಿ ಮೊಹರು ಮಾಡಲಾಗುತ್ತದೆ. ಉಪಕೇಂದ್ರದ 2 ಕೊಠಡಿಗಳಲ್ಲಿ ಟ್ಯಾಂಪರ್ ಎವಿಡೆಂಟ್ ಕವರ್ ಒಳಭಾಗದಲ್ಲಿ ದ್ರವ ಪದಾರ್ಥಗಳಿಂದ ಸಂರಕ್ಷಿಸಲು ಪ್ಯಾಕ್ ಮಾಡಿದ್ದ ಕವರ್‌ಗಳು ಮಾತ್ರ ಪ್ಯಾಕಿಂಗ್ ಅಥವಾ ಸಾಗಣೆ ಸಮಯದಲ್ಲಿ ಯಾಂತ್ರಿಕವಾಗಿ ಹರಿದಿರಬಹುದು. ಈ ಪರೀಕ್ಷಾ ಕೇಂದ್ರಕ್ಕೆ ನೀಡಲಾದ ಪ್ರಶ್ನೆಸಹಿತ ಉತ್ತರ ಪುಸ್ತಿಕೆಗಳ ಸಂಖ್ಯೆ ಇತರ ಪರೀಕ್ಷಾ ಕೇಂದ್ರಗಳಿಗೆ ವಿತರಿಸಲಾದ ಪ್ರಶ್ನೆಪತ್ರಿಕೆಗಳಿಗಿಂತ ದುಪ್ಪಟ್ಟಾಗಿತ್ತು. ಇದು ಕೂಡ ಒಳಗಿನ ಕವರ್ ಹರಿಯಲು ಕಾರಣವಾಗಿರಬಹುದು.
ಪರೀಕ್ಷೆಗೆ ಸಂಬಂಧಿಸಿದ ಸಾಮಗ್ರಿಗಳ ಗೌಪ್ಯತೆ, ಸುರಕ್ಷತೆ ಮತ್ತು ಭದ್ರತೆ ಕಾಪಾಡುವಲ್ಲಿ ಆಯೋಗವು ಅತ್ಯಂತ ಜವಾಬ್ದಾರಿಯುತವಾಗಿ ಕಾಳಜಿ ವಹಿಸುವುದಲ್ಲದೆ ಅತ್ಯಂತ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಭ್ಯರ್ಥಿಗಳು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಕೆಪಿಎಸ್‌ಸಿ ತಿಳಿಸಿದೆ.