ವೈದ್ಯರ ಕೊರತೆ ನೀಗಿಸಲು ಸಚಿವರೊಂದಿಗೆ ಚರ್ಚೆ

KannadaprabhaNewsNetwork | Published : May 7, 2025 12:50 AM
Follow Us

ಸಾರಾಂಶ

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆ ಕುರಿತು ಈಗಾಗಲೇ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಹೆಚ್ಚುವರಿ ವೈದ್ಯರ ನಿಯೋಜನೆಗೆ ರಾಜ್ಯ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್‌ ಕ್ರಮವಹಿಸಿರುವುದಾಗಿ ಶಾಸಕ ಎಚ್‌.ವಿ.ವೆಂಕಟೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆ ಕುರಿತು ಈಗಾಗಲೇ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಹೆಚ್ಚುವರಿ ವೈದ್ಯರ ನಿಯೋಜನೆಗೆ ರಾಜ್ಯ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್‌ ಕ್ರಮವಹಿಸಿರುವುದಾಗಿ ಶಾಸಕ ಎಚ್‌.ವಿ.ವೆಂಕಟೇಶ್‌ ಹೇಳಿದರು. ಜಿಪಂ ಹಾಗೂ ತಾಲೂಕು ಆಡಳಿತದಿಂದ ಮಂಗಳವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕುಂದುಕೊರತೆ ಸೇರಿದಂತೆ ರೋಗಿಗಳ ದಾಖಲು, ಔಷಧ ದಾಸ್ತಾನು ವಿವರ ಸೇರಿದಂತೆ ಇತರೇ ವಿಷಯದ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ಎಸ್‌.ಎಲ್‌.ಬಾಬು ಅವರಿಂದ ದಾಖಲೆ ಸಮೇತ ಮಾಹಿತಿ ಪಡೆದುಕೊಂಡರು.ಕೇವಲ ನಾಲ್ಕು ಮಂದಿ ವೈದ್ಯರು ಸೇವೆ ಸಲ್ಲಿಸುತ್ತಿದ್ದು ರೋಗಿಗಳನ್ನು ಸುಧಾರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರ ಹೆಚ್ಚುವರಿ ವೈದ್ಯರ ನಿಯೋಜನೆಗೆ ಕ್ರಮವಹಿಸಲಾಗುವುದು. ತಾಲೂಕಿನ ತಿರುಮಣಿ ಹಾಗೂ ವೈ.ಎನ್‌.ಹೊಸಕೋಟೆ ಸರ್ಕಾರಿ ಆಸ್ಪತ್ರೆಯ ಸೌಕರ್ಯದ ಕೊರತೆ ಹಾಗೂ ಅಲ್ಲಿನ ವೈದ್ಯರ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಾಗೂ ಶಿಕ್ಷಕರ ಸಂಖ್ಯೆ ಇತರೆ ಕೊರತೆಗಳ ಬಗ್ಗೆ ಬಿಇಒ ಇಂದ್ರಾಣಮ್ಮ ಸಭೆಯಲ್ಲಿ ಗಮನ ಸೆಳೆದಿದ್ದು ತಾಲೂಕಿನ ಶಾಲೆಗಳಲ್ಲಿ 300ಶಿಕ್ಷಕ ಹುದ್ದೆಗಳು ಖಾಲಿ ಇವೆ, ವಿಷಯವಾರು ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಮಸ್ಯೆ ಅಗುತ್ತಿರುವ ಮಾಹಿತಿ ನೀಡುತ್ತಿದ್ದಂತೆ ಅತಿಥಿ ಶಿಕ್ಷಕರ ಸಂಖ್ಯೆ ವಿವರ ಪಡೆದ ಶಾಸಕರು ಈ ಬಗ್ಗೆ ಸಚಿವರಲ್ಲಿ ಚರ್ಚಿಸಿ ಸಮಸ್ಯೆ ನಿವಾರಿಸುವ ಭವವಸೆ ನೀಡಿದರು.

ಅಂಗನವಾಡಿ ಕೇಂದ್ರಗಳ ವಿವರ ಸೇರಿದಂತೆ ಮಕ್ಕಳ ದಾಖಲಾತಿ ಕೇಂದ್ರಗಳ ಕೊರತೆ ಕುರಿತು ಸಿಡಿಪಿಒ ಸುನಿತಾ ಶಾಸಕರಿಗೆ ಮಾಹಿತಿ ನೀಡಿದ್ದು ಮೊಟ್ಟೆ ಹಾಗೂ ಹಾಲಿನ ಪೌಡರ್‌ ಕದ್ದು ಮಾರಾಟ ಮಾಡಿಕೊಳ್ಳುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಸೂಕ್ತ ಕ್ರಮವಹಿಸುವಂತೆ ಸಿಪಿಡಿಒಗೆ ಶಾಸಕರು ಸೂಚಿಸಿದರು.

ನಗರದಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿರುವ ವಿಚಾರ ಕುರಿತು ಶಾಸಕರು ಪ್ರಶ್ನಿಸಿದ್ದು, ಈ ವೇಳೆ ಕಳ್ಳರನ್ನು ಹಿಡಿದು ಬಂಧಿಸುತ್ತಿದ್ದೇವೆ. ಇನ್ನೂ ಪುರಸಭೆಯ 25ಲಕ್ಷ ವೆಚ್ಚದಲ್ಲಿ ಸಿಸಿ ಕ್ಯಾಮೆರಾ ಆಳವಡಿಕೆಗೆ ಕ್ರಮವಹಿಸಿದ್ದು ಸಿಸಿ ಕ್ಯಾಮರೆಗಳಿದ್ದರೆ ಕಳ್ಳತನ ಹಾಗೂ ಇತರೆ ಅಕ್ರಮ ಚಟವಟಿಕೆ ತಡೆಯಲು ಸಾಧ್ಯವಾಗಲಿದೆ.ಆ ಪ್ರಯತ್ಮದಲ್ಲಿ ತಾವಿರುವುದಾಗಿ ಸಿಪಿಐ ಸುರೇಶ್‌ ಶಾಸಕರಿಗೆ ತಿಳಿಸಿದರು. ಪಶುಪಾಲನಾ ಇಲಾಖೆಯ ಪ್ರಗತಿ ಹಾಗೂ ಪ್ರಸಕ್ತ ಸಾಲಿಗೆ ಫಲಾನುಭವಿಗಳಿಗೆ ಸಿಗುವ ಸೌಲಭ್ಯದ ಬಗ್ಗೆ ಸಹಾಯಕ ನಿರ್ದೇಶಕ ಹೊಸಕೇರಪ್ಪ ಸಭೆಗೆ ಮಾಹಿತಿ ನೀಡಿದರು. .

ಮುಜರಾಯಿ ಇಲಾಖೆಯ ನಾಗಲಮಡಿಕೆ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಪ್ರಗತಿಯ ವಿವರ ಕುರಿತು ಪ್ರಶ್ನಿಸುತ್ತಿದ್ದಂತೆ ರಾಜಗೋಪುರ ಹಾಗೂ ಇತರೆ ಅಗತ್ಯ ಸೌಲಭ್ಯದ ಬಗ್ಗೆ ಬ್ಲೂ ಪ್ರಿಂಟ್ ಸಿದ್ದವಾಗಿದೆ. ಸಮಿತಿ ರಚಿಸಿ ದೇವಸ್ಥಾನದ ಪ್ರಗತಿಗೆ ಚಾಲನೆ ನೀಡಬೇಕಿದೆ ಎಂದರು.

ಪಟ್ಟಣಕ್ಕೆ ಬೈಪಾಸು ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸಿದ್ದತೆ ಕೈಗೊಂಡಿದ್ದು ಮೂರು ರೀತಿಯ ನೀಲಿ ನಕ್ಷೆ ತಯಾರಾಗಿದೆ.ತಮ್ಮ ಗಮನಕ್ಕೆ ತರುವ ಮೂಲಕ ತಮ್ಮ ಆದೇಶದಂತೆ ಪ್ರಗತಿ ಕಾರ್ಯ ಕೈಗೊಳ್ಳುವುದಾಗಿ ಎಇಇ ಅನಿಲ್‌ ಕುಮಾರ್‌ ಶಾಸಕರಿಗೆ ತಿಳಿಸಿದರು.ಈ ವೇಳೆ ತಹಶಿಲ್ದಾರ್ ವರದರಾಜು, ತಾಪಂ ಇಒ ಜಾನಕಿರಾಮ್‌, ಗ್ಯಾರೆಂಟಿ ಯೋಜನೆಯ ತಾಲೂಕು ಅಧ್ಯಕ್ಷರಾದ ಕೆ.ಎಸ್.ಪಾಪಣ್ಣ, ಎಸ್‌ಸಿ ನಿಗಮದ ಅಭಿವೃದ್ಧಿ ಅಧಿಕಾರಿ ರಾಜಶೇಖರಪ್ಪ, ತಾಪಂ ಮಾರುತಿ ಪ್ರಸಾದ್‌ ಹಾಗೂ ಇತರೆ ಅನೇಕ ಮಂದಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಇಒ ಇದ್ದಾರೆ.