-ಸರ್ಕಾರಿ, ಖಾಸಗಿ ಕಟ್ಟಡಗಳಲ್ಲಿ ಮಳೆಕೊಯ್ಲು, ಸಸಿ ನೆಡಲು ಆಂದೋಲನ ಒಕ್ಕೂಟ ಗಡುವು । ಅಪರ ಜಿಲ್ಲಾಧಿಕಾರಿ ಲೋಕೇಶ್‌ರಿಗೆ ಬಲ್ಲೂರು ರವಿಕುಮಾರ ಮನವಿ
----ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲೆಯ 538 ಕೆರೆಗಳಿದ್ದು, ಅರಣ್ಯ ಇಲಾಖೆಗೆ ಸೇರಿದ ಕೆರೆಗಳೂ ಇದ್ದು, ಸ್ವಾತಂತ್ರ್ಯ ಬಂದಾಗಿನಿಂದ ಇಂದಿಗೂ ಸಮರ್ಪಕವಾಗಿ ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನ ಒಕ್ಕೂಟವು ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ.ನಗರದ ಜಿಲ್ಲಾಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ ಅವರಿಗೆ ಒಕ್ಕೂಟದ ರಾಜ್. ಸಂಚಾಲಕ ಬಲ್ಲೂರು ರವಿಕುಮಾರ ಇತರರ ನೇತೃತ್ವದಲ್ಲಿ ಮನವಿ ಅರ್ಪಿಸಿ, ಜಿಲ್ಲೆಯ ಎಲ್ಲಾ ಕೆರೆಗಳ ಪೈಕಿ ಶೇ.50ರಷ್ಟು ಕೆರೆಗಳ ಹೂಳೆತ್ತಿ, ರೈತರಿಗೆ ಕೆರೆಯ ಮಣ್ಣನ್ನು ನೀಡಿದರೆ ಆರೋಗ್ಯಕರವಾದ ಆಹಾರೋತ್ಪನ್ನ ಬೆಳೆದು, ಜನರಿಗೆ ನೀಡುವ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಸರ್ಕಾರದ ಆರ್ಥಿಕ ಹೊರೆಯನ್ನು ಶೇ.50ರಷ್ಟು ಕಡಿಮೆ ಮಾಡಬಹುದು ಎಂದು ಮನವರಿಕೆ ಮಾಡಿಕೊಟ್ಟಿತು.
ಇದೇ ವೇಳೆ ಮಾತನಾಡಿದ ಬಲ್ಲೂರು ರವಿಕುಮಾರ, ದಾವಣಗೆರೆ ನಗರ, ತಾಲೂಕುಗಳು, ಗ್ರಾಮೀಣ ಪ್ರದೇಶದ ಚರಂಡಿ, ಒಳ ಚರಂಡಿ ನೀರನ್ನು ಕೆರೆಗಳಿಗೆ ಬಿಡುವುದು ಹಾಗೂ ನದಿಗೆ, ಹಳ್ಳಗಳು, ಕೆರೆಗಳು, ನೀರಿನ ತೊರೆಗಳಿಗೆ ಬಿಡುವುದು ಸಾಮಾನ್ಯ. ಜಿಲ್ಲಾ ಕೇಂದ್ರದ ತ್ಯಾಜ್ಯ ನೀರನ್ನು ಎಪಿಎಂಸಿ ಹಿಂಭಾಗದ ಹಳ್ಳಕ್ಕೆ ರಾಜ ಕಾಲುವೆ ಹೆಸರಿನಲ್ಲಿ ತಂದು ಬಿಡುವ ಕೆಲಸ ನಿರಂತರ ನಡೆಯುತ್ತಿದೆ. ಹರಿಹರ ನಗರದ ಚರಂಡಿ, ಒಳ ಚರಂಡಿ ನೀರನ್ನು ಸಹ ಜೀವನದಿ ತುಂಗಭದ್ರಾ ನದಿಗೆ ಬಿಡಲಾಗುತ್ತಿದೆ ಎಂದು ದೂರಿದರು.ನದಿ, ಕೆರೆ, ಹಳ್ಳ, ತೊರೆಗಳಿಗೆ ಹೀಗೆ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ತ್ಯಾಜ್ಯ ನೀರು, ಚರಂಡಿ, ಒಳ ಚರಂಡಿ ನೀರನ್ನು ಬಿಡುವುದನ್ನು ತಪ್ಪಿಸುವ ಕೆಲಸವನ್ನು ಜಿಲ್ಲಾಡಳಿತ ಪ್ರಥಮಾದ್ಯತೆ ನೀಡಬೇಕು. ದಾವಣಗೆರೆ, ಇತರೆ ನಗರಗಳ ಮನೆಗಳ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿದರೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದನ್ನು ಸಹ ಶೇ.40ರಷ್ಟು ಕಡಿಮೆ ಮಾಡಬಹುದು. ಸರ್ಕಾರಿ ಇಲಾಖೆಗಳೂ, ಸಿಬ್ಬಂದಿ ವಸತಿ ಗೃಹ, ಖಾಸಗಿ ಕಟ್ಟಡಗಳ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿದರೆ, ನೀರಿನ ಬವಣೆ ಸಹ ತಪ್ಪಿಸಿ, ಅಂತರ್ಜಲ ವೃದ್ಧಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಹೆಚ್ಚುವರಿಯಾದ ನೀರನ್ನು ಇಂಗು ಗುಂಡಿ ನಿರ್ಮಿಸಿ, ಮಳೆ ನೀರನ್ನು ಭೂಮಿಯೊಳಗೆ ಕಳಿಸಿದರೆ ಅಂತರ್ಜಲವೂ ವೃದ್ಧಿಯಾಗುತ್ತದೆ. ಕೊಳವೆ ಬಾವಿಗಳಲ್ಲಿ ಬರುವ ಫ್ಲೋರೈಡ್ ಸೇರಿದಂತೆ ಅಪಾಯಕಾರಿ ಲವಣಾಂಶ ನೀರಿನ ಮುಕ್ತ ಕೊಟ್ಟು, ಶುದ್ಧ ನೀರನ್ನು ಜನರಿಗೆ ಒದಗಿಸಿದಂತಾಗುತ್ತದೆ. ಈಗಾಗಲೇ ಮಳೆಗಾಲವು ಸಮೀಪಿಸುತ್ತಿದ್ದು, ಸರ್ಕಾರಿ-ಖಾಸಗಿ ಕಟ್ಟಡಗಳು, ಆವರಣ, ಶಾಲಾ-ಕಾಲೇಜುಗಳ ಆವರಣ, ಮೈದಾನಗಳು, ರಸ್ತೆಯ ಬದಿಯ ಜಾಗ, ಸಂಘ-ಸಂಸ್ಥೆಗಳಲ್ಲೂ ಇಂತಹದ್ದೊಂದು ಅಂತರ್ಜಲ ಸಂಗ್ರಹಿಸುವ ಕೆಲಸ ಸಮರೋಪಾದಿಯಾಗಿ ಆಗಬೇಕು ಎಂದು ಅವರು ಮನವಿ ಮಾಡಿದರು.ಸರ್ಕಾರಿ-ಖಾಸಗಿ ಕಟ್ಟಡಗಳು, ಆವರಣ, ಶಾಲಾ-ಕಾಲೇಜು ಆವರಣ, ಮೈದಾನ, ರಸ್ತೆಯ ಬದಿಯ ಜಾಗ, ಸಂಘ-ಸಂಸ್ಥೆಗಳನ್ನು ಕ್ರೋಢೀಕರಿಸಿಕೊಂಡು, ಸಸಿಗಳನ್ನು ನೆಟ್ಟು, ಅವುಗಳನ್ನು ಆರೈಕೆ ಮಾಡಬೇಕು. ವಿದ್ಯಾರ್ಥಿ, ಯುವ ಜನರು, ನಾಗರಿಕರು ಎಲ್ಲರಿಗೂ ಪರಿಸರ ಸಂರಕ್ಷಣೆ ಮಹತ್ವ ತಿಳಿಸುವ ಕೆಲಸವಾಗಬೇಕು. ಒಂದು ತಿಂಗಳ ಒಳಗಾಗಿ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಡಿಸಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಸಬೇಕಾದೀತು ಎಂದು ಬಲ್ಲೂರು ರವಿಕುಮಾರ ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.
ಒಕ್ಕೂಟದ ಮುಖಂಡರಾದ ಹೆಬ್ಬಾಳು ರಾಜಯೋಗಿ, ಮಿಯ್ಯಾಪುರ ತಿರುಮಲೇಶ, ವೀರಪ್ಪ ಹ.ಸೋಮಶೇಖರ ಇದ್ದರು. ----ಫೋಟೊ: ದಾವಣಗೆರೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್‌ರಿಗೆ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನ ಒಕ್ಕೂಟದ ರಾಜ್ಯ ಸಂಚಾಲಕ ಬಲ್ಲೂರು ರವಿಕುಮಾರ ಇತರರ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.
6ಕೆಡಿವಿಜಿ1, 2