ಕೊಪ್ಪಳ:
ದಲಿತರಿಗೆ ಕಟಿಂಗ್ ಮಾಡಿದರೆ ಸರ್ವಣೀಯರು ಬರುವುದಿಲ್ಲವೆಂದು ಕ್ಷೌರಿಕರು ಎರಡು ತಿಂಗಳಿಂದ ಕಟಿಂಗ್ ಶಾಪ್‌ಗಳನ್ನು ಬಂದ್ ಮಾಡಿ ಕೊಪ್ಪಳಕ್ಕೆ ಹೋಗಿ ಕಟಿಂಗ್ ಮಾಡುತ್ತಿರುವ ಘಟನೆ ತಾಲೂಕಿನ ಮುದ್ದಾಬಳಿ ಗ್ರಾಮದಲ್ಲಿ ನಡೆದಿದೆ.ಇದೀಗ ಸರ್ವಣೀಯರು ಸೇರಿದಂತೆ ಎಲ್ಲರೂ ಕಟಿಂಗ್ ಮಾಡಿಸಿಕೊಳ್ಳಲು ಕೊಪ್ಪಳಕ್ಕೆ ಹೋಗಬೇಕಾಗಿದೆ. ಈ ಮೂಲಕ ಅಸ್ಪೃಶ್ಯತೆಯ ಭೂತ ಇನ್ನೂ ಹಳ್ಳಿಗಳಲ್ಲಿ ಜೀವಂತವಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಇನ್ನೂ ಕೆಲವರು ಗ್ರಾಮದಲ್ಲಿಯೇ ಮನೆ-ಮನೆಗೆ ತೆರಳಿ ಕಟಿಂಗ್ ಮಾಡುತ್ತಿದ್ದಾರೆಂಬ ಆರೋಪವೂ ಕೇಳಿಬಂದಿದೆ.
ಆಗಿದ್ದೇನು?ಮುದ್ದಾಬಳ್ಳಿ ಗ್ರಾಮದಲ್ಲಿ ಇರುವ ಕಟಿಂಗ್ ಶಾಪ್‌ನಲ್ಲಿ ಮೊದಲು ದಲಿತರಿಗೆ ಕಟಿಂಗ್ ಮಾಡಲಾಗುತ್ತಿತ್ತು. ಆದರೆ, ಹಿರೇಬಗನಾಳ ಮತ್ತು ಸಂಗನಾಳದಲ್ಲಿ ನಡೆದ ಘಟನೆಯಿಂದ ಕ್ಷೌರಿಕರು ಅಂಜಿ, ನಮ್ಮೂರಲ್ಲಿ ಶಾಪ್ ತೆಗೆದು ಕಟಿಂಗ್ ಮಾಡುವುದೇ ಬೇಡ, ಕೊಪ್ಪಳಕ್ಕೆ ಹೋಗಿ, ಕಾಯಕ ಮಾಡಿದರೆ ಆಯಿತು ಎಂದು ಕಟಿಂಗ್ ಶಾಪ್ ಬಂದ್ ಮಾಡಿದ್ದಾರೆ.
ಈ ಕುರಿತು ಖುದ್ದು ಕ್ಷೌರಿಕರೇ ಪೊಲೀಸ್ ಠಾಣೆಗೆ ಹೋಗಿ, ನಾವು ದಲಿತರು ಸೇರಿದಂತೆ ಎಲ್ಲರ ಕಟಿಂಗ್ ಮಾಡಲು ಸಿದ್ಧರಿದ್ದೇವೆ ಎಂದು ಬರೆದುಕೊಟ್ಟು ಬಂದಿದ್ದಾರೆ. ಆದರೆ, ಈಗ ಕಳದೆರಡು ತಿಂಗಳಿಂದ ಮುದ್ದಾಬಳ್ಳಿ ಗ್ರಾಮದಲ್ಲಿ ಕಟಿಂಗ್ ಶಾಪ್ ಬಂದ್ ಆಗಿರುವ ಕುರಿತು ಫೋಟೋಗಳು ವೈರಲ್ ಆಗುತ್ತಿದ್ದು, ದಲಿತರಿಗೆ ಕಟಿಂಟ್ ಮಾಡಬಾರದು ಎನ್ನುವ ಕಾರಣಕ್ಕಾಗಿಯೇ ಶಾಪ್ ಬಂದ್ ಮಾಡಿದ್ದಾರೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಕಟಿಂಗ್ ಶಾಪ್ ಬಂದ್ ಮಾಡಿ, ಮನೆ-ಮನೆಗೆ ಹೋಗಿ ಕಟಿಂಗ್ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ.ಮುದ್ದಾಬಳ್ಳಿ ಗ್ರಾಮದಲ್ಲಿ ಕಟಿಂಗ್ ಶಾಪ್ ಬಂದ್ ಮಾಡಿರುವುದು ಸರಿಯಲ್ಲ. ಜಿಲ್ಲಾಧಿಕಾರಿಗಳು ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು.ಬಸವರಾಜ ದಢೇಸೂಗೂರು, ಬಿಜೆಪಿ ಜಿಲ್ಲಾಧ್ಯಕ್ಷ, ಕೊಪ್ಪಳ