ಅರಣ್ಯಾಧಿಕಾರಿ ಮಹೇಶ್ ಕನ್ಕಟ್ಟಿ ಹತ್ಯೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Jun 29, 2024, 12:36 AM IST
ಉಪವಲಯ ಅರಣ್ಯ ಅಧಿಕಾರಿ ಮಹೇಶ್ ಕನ್ಕಟ್ಟಿ ಅವರ ಕೊಲೆ ಪ್ರಕರಣ ಖಂಡಿಸಿ ತಾಲೂಕು ಕೋಲಿ ಕಬ್ಬಲಿಗ ಸಮಾಜ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

Protest against the killing of Forest Officer Mahesh Kankatti

- ಕೋಲಿ ಕಬ್ಬಲಿಗ ಸಮಾಜ ಹಾಗೂ ವಿವಿಧ ಸಂಘಟನೆಗಳು ಧರಣಿ; ಇಬ್ಬರು ಅಧಿಕಾರಿಗಳ ಅಮಾನತಿಗೆ ಒತ್ತಾಯ

ಕನ್ನಡಪ್ರಭ ವಾರ್ತೆ ಶಹಾಪುರ

ಉಪ ವಲಯ ಅರಣ್ಯ ಅಧಿಕಾರಿ ಮಹೇಶ್ ಕನ್ಕಟ್ಟಿ ಅವರ ಬರ್ಬರ ಹತ್ಯೆ ಖಂಡಿಸಿ ಕೋಲಿ ಕಬ್ಬಲಿಗ ಸಮಾಜ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ನಗರದ ಬಸವೇಶ್ವರ ಸವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ ಕೊಲೆ ಪ್ರಕರಣ ಮುಚ್ಚಿ ಹಾಕಲೆತ್ನಿಸಿದ ಆರೋಪ ಎದುರಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಎಂ. ಪಾಟೀಲ್ ಹಾಗೂ ವಲಯ ಅರಣ್ಯ ಅಧಿಕಾರಿ ಜಯಶ್ರೀ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಲಾಯಿತು.

ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಹಸೀಲ್ದಾರ್ ಉಮಾಕಾಂತ ಹಳ್ಳೆ ಮತ್ತು ಡಿವೈಎಸ್ಪಿ ಜಾವಿದ್ ಇನಾಮದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಒಬ್ಬ ಸರ್ಕಾರಿ ಅಧಿಕಾರಿಯ ಬರ್ಬರ ಹತ್ಯೆ ನಡೆದಿದೆ. ಇದರ ಬಗ್ಗೆ ಸಚಿವರು ಯಾವುದೇ ಹೇಳಿಕೆ ನೀಡದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಚಿವರ ಸಂಬಂಧಿಕರಿಗೆ ಇಂಥ ಕೃತ್ಯ ಎಸಗಿದ್ದರೆ ಹೀಗೆ ಮೌನವಹಿಸುತ್ತಿದ್ದರೇ? ಎಂದು ಪ್ರಶ್ನಿಸುವ ಮೂಲಕ ಸಚಿವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರು, ಜೂ.5 ರಂದು ನಗರದ ಮೋಟಗಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಉಪವಲಯ ಅರಣ್ಯ ಅಧಿಕಾರಿ ಮಹೇಶ್ ಕನ್ಕಟ್ಟಿಯವರು ಊಟ ಮಾಡಲು ಹೋದಾಗ ಐದು ಜನ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆಯ ಸಂಪೂರ್ಣ ವಿವರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೂ ಕೊಲೆಗಡುಕರನ್ನು ಬಂಧಿಸಲು ಮೀನಾಮೇಷ ಯಾಕೆ? ಎಂದು ಪ್ರಶ್ನಿಸಿ, ಹಂತಕರ ರಕ್ಷಣೆಗೆ ನಿಂತು ಸಂಧಾನಕ್ಕೆ ಪ್ರಯತ್ನ ಮಾಡಿದ ಪೊಲೀಸ್ ಅಧಿಕಾರಿ ಎಸ್.ಎಂ. ಪಾಟೀಲ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಕೊಲೆ ಪ್ರಕರಣದಲ್ಲಿ ತಮ್ಮ ಇಲಾಖೆಯ ಅಧಿಕಾರಿಯ ಬೆಂಬಲಕ್ಕೆ ನಿಲ್ಲಬೇಕಾಗಿದ್ದ ವಲಯ ಅರಣ್ಯ ಅಧಿಕಾರಿ ಜಯಶ್ರೀ, ಮೃತನ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಕೊಲೆಗಡಕರ ರಕ್ಷಣೆಗೆ ನಿಂತಿರುವುದು ಸ್ಪಷ್ಟವಾಗುತ್ತದೆ. ಅಲ್ಲದೇ ಹೃದಯಾಘಾತ ಎಂದು ಸುಳ್ಳು ರಿಪೋರ್ಟ್ ನೀಡಿದ ವೈದ್ಯಾಧಿಕಾರಿಯನ್ನೂ ಕೂಡಲೇ ಬಂಧಿಸಬೇಕು.

ಕೋಲಿ ಸಮಾಜದ ಹಿರಿಯ ರಾಜ್ಯ ಮುಖಂಡರಾದ ಲಲಿತಾ ಅನಪೂರ ಮಾತನಾಡಿ, ಶಹಾಪುರದಲ್ಲಿ ಕೊಲೆ, ಕಳ್ಳತನ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ. ಈಗ ಇಡೀ ವ್ಯವಸ್ಥೆ ಕೊಲೆಗಡುಕರ ರಕ್ಷಣೆಗೆ ನಿಂತುಕೊಂಡಿದೆ. ಈ ಪ್ರಕರಣದಲ್ಲಿ ಶಾಮೀಲಾದ ಎಲ್ಲಾ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಿಷ್ಪಕ್ಷಪಾತ ತನಿಖೆಗೆ ಸಿಐಡಿಗೆ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಕೋಲಿ ಸಮಾಜ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಹಳ ವರ್ಷಗಳಿಂದ ನಗರದ ಬಸವೇಶ್ವರ ವೃತ್ತದಲ್ಲಿ ಅನೇಕ ಪ್ರತಿಭಟನೆಗಳು ನಡೆದಿವೆ. ಮಹೇಶ್ ಕನ್ಕಟ್ಟಿ ಅವರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ತಹಸೀಲ್ದಾರ್ ಗೆ ಮನವಿ ನೀಡಿದ್ದೆವು. ಆದರೆ ತಹಸೀಲ್ದಾರ್, ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಆದ್ದರಿಂದ ಯಾವುದೇ ಪ್ರತಿಭಟನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಉದ್ದೇಶಪೂರ್ವಕಾಗಿ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಆರೋಪಿಸಿದರು.

ಸಮಾಜದ ಹಿರಿಯ ಮುಖಂಡರಾದ ಸಣ್ಣ ನಿಂಗಪ್ಪ ನಾಯ್ಕೋಡಿ, ನಿವೃತ್ತ ಪ್ರಾಂಶುಪಾಲ ಚೆನ್ನಾರೆಡ್ಡಿ ಪಾಟೀಲ್ ತಂಗಡಿಗಿ, ಅಮರೇಶ್ ಕಾಮನ ಕೆರೆ, ಎಸ್ ಡಿಪಿಐ ರಾಜ್ಯ ಉಪಾಧ್ಯಕ್ಷ ಸೈಯದ್ ಹುಸೇನ್ ಖಾಲಿದ್, ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಶಿವಕುಮಾರ ಶಿರವಾಳ, ರಾಯಪ್ಪ ಸಾಲಿಮನಿ, ವೆಂಕಟೇಶ್ ಬೋನೆರ್, ಅಬ್ದುಲ್ ಹಾದಿಮನಿ, ಮಲ್ಲರೆಡ್ಡಿ ವಿಭೂತಿಹಳ್ಳಿ, ಆನಂದ ಟೈಗರ್, ಸೋಮಗೌಡ ಕಟ್ಟಿಮನಿ, ಮಲ್ಲಣ್ಣ ಮಣಿಗಿರಿ, ವೆಂಕಟೇಶ್ ನಾಯ್ಕೋಡಿ ,ಭೀಮಣ್ಣ ಕಟ್ಟಿಮನಿ, ಶರಣು ದೇವರಮನಿ, ಕನ್ನಡ ಪರ ಸಂಘಟನೆಯ ಒಕ್ಕೂಟ ಅಧ್ಯಕ್ಷ ಮಲ್ಲಯ್ಯ ಸ್ವಾಮಿ ಇಟಗಿ, ರೇವಣಸಿದ್ದಯ್ಯ ಸ್ವಾಮಿ ಹಾಗೂ ಇತರರಿದ್ದರು.

-----

ಕೊಲೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ ಪೊಲೀಸ್ ಅಧಿಕಾರಿ ಮನೆಯಲ್ಲಿ ಈ ರೀತಿ ಕೊಲೆಯಾಗಿದ್ದರೆ ಹಣ ತಿಂದು ಪ್ರಕರಣ ಮುಚ್ಚಿ ಹಾಕುತ್ತಿದ್ದರೇನು? ಹೆತ್ತ ಕರುಳಿನ ಶಾಪ ಒಳ್ಳೆಯದಲ್ಲ. ನನ್ನ ಕಣ್ಣೀರಿನ ಶಾಪ ಅವರನ್ನು ಸುಮ್ಮನೆ ಬಿಡುವುದಿಲ್ಲ.

ಶಶಿಕಲಾ ಕನ್ಕಟ್ಟಿ, ಕೊಲೆಯಾದ ಮಹೇಶ್ ಕನ್ಕಟ್ಟಿ ಅವರ ತಾಯಿ.

----

ಹಣ ಕೊಟ್ಟರೆ ಎಂಥ ಪ್ರಕರಣವಾದರೂ ಮುಚ್ಚಿ ಹಾಕಬಹುದು ಎನ್ನುವುದಕ್ಕೆ ಮಹೇಶ್ ಕನ್ಕಟ್ಟಿ ಅವರ ಕೊಲೆ ಸಾಕ್ಷಿಯಾಗಿದೆ. ಒಬ್ಬ ಸರ್ಕಾರಿ ನೌಕರನಿಗೆ ರಕ್ಷಣೆ ಇಲ್ಲ ಎಂದ ಮೇಲೆ ಸಾಮಾನ್ಯ ಜನರ ಗತಿಯೇನು? ಸಚಿವರ ಸ್ವ ಕ್ಷೇತ್ರದಲ್ಲೇ ಇಂಥ ದುರ್ಘಟನೆ ನಡೆದಿದೆ. ಇದಕ್ಕೆ ಸಚಿವರು ಉತ್ತರಿಸಬೇಕು.

ಲಲಿತಾ ಅನಪೂರ, ಕೋಲಿ ಸಮಾಜದ ರಾಜ್ಯ ಮುಖಂಡರು.

----

ಕೊಲೆ ಪ್ರಕರಣದ ಸಂಪೂರ್ಣ ವಿವರ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಆದರೂ ಕೊಲೆಗಡುಕರನ್ನು ಇನ್ನೂ ಬಂಧಿಸಿಲ್ಲ. ಕೊಲೆ ಪ್ರಕರಣದಲ್ಲಿ ಶಾಮೀಲಾಗಿ, ಪ್ರಕರಣವನ್ನೇ ಮುಚ್ಚಿ ಹಾಕುವ ಪ್ರಯತ್ನ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಎಂ. ಪಾಟೀಲ್ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು. ನಿಷ್ಪಕ್ಷಪಾತ ತನಿಖೆಗೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು.

- ಬಕ್ಕ ಪ್ರಭು, ಕೊಲೆಯಾದ ಮಹೇಶ್ ಕನ್ಕಟ್ಟಿ ಅವರ ಸಹೋದರ.

----

28ವೈಡಿಆರ್6

ಉಪವಲಯ ಅರಣ್ಯ ಅಧಿಕಾರಿ ಮಹೇಶ್ ಕನ್ಕಟ್ಟಿ ಅವರ ಕೊಲೆ ಪ್ರಕರಣ ಖಂಡಿಸಿ ತಾಲೂಕು ಕೋಲಿ ಕಬ್ಬಲಿಗ ಸಮಾಜ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

----

28ವೈಡಿಆರ್

ಉಪವಲಯ ಅರಣ್ಯ ಅಧಿಕಾರಿ ಮಹೇಶ್ ಕನ್ಕಟ್ಟಿ ಅವರ ಕೊಲೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿ ಎಸ್.ಎಂ. ಪಾಟೀಲ್ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಕೋಲಿ ಕಬ್ಬಲಿಗ ಸಮಾಜ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ತಹಸೀಲ್ದಾರ್ ಮತ್ತು ಡಿವೈಎಸ್ಪಿ ಗೆ ಮನವಿ ಪತ್ರ ಸಲ್ಲಿಸಲಾಯಿತು.

----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ