ಕಾರ್ಮಿಕ ಸಂಹಿತೆ ವಿರೋಧಿಸಿ 8ರಂದು ವಿಧಾನಸೌಧ ಚಲೋ

KannadaprabhaNewsNetwork |  
Published : Sep 05, 2026, 01:45 AM IST
ಪೋಟೋ 1 : ದಾಬಸ್‍ಪೇಟೆ ಪಟ್ಟಣದ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಆಯೋಜಿಸಿದ್ದ ಜಾಥಾ ಪ್ರಚಾರಾಂದೋಲನಾ ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಮಾತನಾಡಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸೇರಿದಂತೆ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಸೆ. 8ರಂದು ಮಂಗಳವಾರ ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ತಿಳಿಸಿದರು

ದಾಬಸ್‍ಪೇಟೆ: ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸೇರಿದಂತೆ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಸೆ. 8ರಂದು ಮಂಗಳವಾರ ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ತಿಳಿಸಿದರು.

ಪಟ್ಟಣದಲ್ಲಿ ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಆಯೋಜಿಸಿದ್ದ ಜಾಥಾ ಪ್ರಚಾರಾಂದೋಲನಾ ಕಾರ್ಯಕ್ರಮದಲ್ಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 29 ಕಾರ್ಮಿಕ ಕಾಯಿದೆಗಳನ್ನು ನಾಲ್ಕು ಸಂಹಿತೆಗಳಾಗಿ ವಿಲೀನಗೊಳಿಸುವ ಮೂಲಕ ಕಾರ್ಮಿಕರಿಗೆ ಈ ಹಿಂದೆ ಇದ್ದ ಅಲ್ಪಪ್ರಮಾಣದ ಕಾನೂನು ರಕ್ಷಣೆಯನ್ನೂ ದುರ್ಬಲಗೊಳಿಸಿದೆ. ರಾಜ್ಯ ಸರ್ಕಾರ ಸಹ ಕಾರ್ಮಿಕ ಸಂಘಟನೆಗಳ ಪರ್ಯಾಯ ಸಲಹೆಗಳನ್ನು ಪರಿಗಣಿಸದೆ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಮೇ 22ರಂದು ಹೊರಡಿಸಲಾದ ಕನಿಷ್ಠ ವೇತನ ಅಧಿಸೂಚನೆಯು 8-9 ವರ್ಷಗಳ ಬಳಿಕ ಬಂದಿದ್ದು, ಬೀಡಿ, ಪ್ಲಾಂಟೇಷನ್, ಕೈಮಗ್ಗ, ಗಾಮೆರ್ಂಟ್ಸ್ ಸೇರಿದಂತೆ 19 ಕೈಗಾರಿಕೆಗಳಿಗೆ ಅನ್ವಯಿಸದಿರುವುದರಿಂದ 15-20ಲಕ್ಷ ಕಾರ್ಮಿಕರು ಕನಿಷ್ಠ ವೇತನದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ರಾಜ್ಯದ 1.77 ಕೋಟಿ ಕಾರ್ಮಿಕರಿಗೆ ನಾಲ್ಕು ವರ್ಷಗಳಿಂದ ವೇತನ ಪರಿಷ್ಕರಣೆ ಸಿಗದೆ ಅನ್ಯಾಯವಾಗಿದೆ. ಮಾಸಿಕ ಕನಿಷ್ಠ ವೇತನವನ್ನು ₹42,000ಕ್ಕೆ ನಿಗದಿಪಡಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಕಲ್ಪಿಸುವುದರ ಜೊತೆಗೆ ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರನ್ನು ಕನಿಷ್ಠ ವೇತನದ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ತಿರುಮಲಾಚಾರ್ ಮಾತನಾಡಿ, ರಾಜ್ಯ ಸರ್ಕಾರ ತಾನೇ ಹೊರಡಿಸಿದ ಕನಿಷ್ಠ ವೇತನ ಅಧಿಸೂಚನೆಯನ್ನು ತಾನೇ ತಡೆಹಿಡಿದಿರುವುದು ಖಂಡನೀಯ. ಈ ವಿಚಾರದಲ್ಲಿ ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿಯ ಕ್ರಮ ಸಂವಿಧಾನ ವಿರೋಧಿಯಾಗಿದೆ ಎಂದು ಟೀಕಿಸಿದ್ದಲ್ಲದೆ ರೈತರ ಫಲವತ್ತಾದ ಭೂಮಿಯ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು, ಬಿಪಿಎಲ್ ಕಾರ್ಡ್‍ಗೆ ಇರುವ ₹1.20 ಲಕ್ಷ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ದಾಬಸ್‍ಪೇಟೆ ವಲಯ ಅಧ್ಯಕ್ಷ ಬಸವರಾಜು ಮಾತನಾಡಿ, 1970ರ ಕಾಯ್ದೆಯ ಉಲ್ಲಂಘನೆಯಿಂದ ಲಕ್ಷಾಂತರ ನೌಕರರು ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದು, ಸುಪ್ರೀಂಕೋರ್ಟ್ ನೀಡಿರುವ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತೀರ್ಪನ್ನು ಜಾರಿಗೊಳಿಸಬೇಕು. ಸೆ.8ರ ವಿಧಾನಸೌಧ ಚಲೋಗೆ ಬೆಂಬಲವಾಗಿ ಜಿಲ್ಲೆಯಿಂದ ಸುಮಾರು 5000 ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಖಜಾಂಚಿ ಮೋಹನ್ ಬಾಬು ಸೇರಿದಂತೆ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದ ಪದಾಧಿಕಾರಿಗಳು, ಕಾರ್ಮಿಕರು ಉಪಸ್ಥಿತರಿದ್ದರು.

ಪೋಟೋ 1 :

ದಾಬಸ್‍ಪೇಟೆಯಲ್ಲಿ ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಆಯೋಜಿಸಿದ್ದ ಜಾಥಾ ಪ್ರಚಾರಾಂದೋಲನಾ ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಒಪಿ ರಾಸಾಯನಿಕ ಮಿಶ್ರಿತ ಬಣ್ಣದ ಗಣಪತಿ ಮಾರಾಟ ನಿಷೇಧ
ಬಿಸಲವಾಡಿ ಗ್ರಾಮದಲ್ಲಿ ನೂತನ ಶ್ರೀರಾಮ ಮಂದಿರ ಉದ್ಘಾಟನೆ