ಮದ್ದೂರು: ಶಿಕ್ಷಕಿ ಹೊಡೆದರು ಎಂಬ ಕಾರಣಕ್ಕೆ ಮನನೊಂದ ಶಾಲಾ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ತಾಲೂಕಿನ ಸಿ.ಎ.ಕೆರೆ ಹೋಬಳಿ ಗುಡಿಗೆರೆ ಗ್ರಾಮದಲ್ಲಿ ಬುಧವಾರ ನಡೆದಿರುವುದು ಬೆಳಕಿಗೆ ಬಂದಿದೆ. ಗ್ರಾಮದ ಜಿ.ಆರ್.ಜಯಕುಮಾರ್ ಮತ್ತು ಎಚ್.ಎಸ್.ಅಶ್ವಿನಿ ದಂಪತಿ ಪುತ್ರಿ ವಿದ್ಯಾಶ್ರೀ (9) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಕೆ. ಎಂ.ದೊಡ್ಡಿಯ ಭಾರತೀ ಎಕ್ಸಲೆನ್ಸ್ ಆಫ್ ಬ್ರಿಲಿಯನ್ಸ್ ಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾಶ್ರೀ ತರಗತಿ ಟೀಚರ್ ನಿಂದಿಸಿ ಹೊಡೆದರೆಂಬ ಕಾರಣಕ್ಕೆ ಬುಧವಾರ ಸಂಜೆ 4.15ರ ಸುಮಾರಿಗೆ ತನ್ನ ತಂಗಿ ಪ್ರಕೃತಿಯೊಂದಿಗೆ ಮನೆಗೆ ಬಂದು ಕೊಠಡಿಯಲ್ಲಿ ಫೋಟೋ ನೇತು ಹಾಕಲು ಇದ್ದ ಮೊಳೆಗೆ ವೆಲ್ ನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದರಿಂದ ಅಸ್ವಸ್ಥಗೊಂಡ ವಿದ್ಯಾಶ್ರೀಯನ್ನು ಪೋಷಕರು ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಮದ್ದೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಕರೆ ತರುತ್ತಿದ್ದಾಗ ಮಾರ್ಗ ಮಧ್ಯ ಕೊನೆ ಉಸಿರೆಳೆದಿದ್ದಾಳೆ. ಈ ಸಂಬಂಧ ವಿದ್ಯಾಶ್ರೀ ತಾಯಿ ಅಶ್ವಿನಿ ನೀಡಿದ ದೂರಿನ ಅನ್ವಯ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.