ಕೆಪಿಎಸ್‌ ಶಾಲೆಗಳನ್ನು ಮುಚ್ಚುವ ಹುನ್ನಾರ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Nov 22, 2025, 01:45 AM IST
21ಎಚ್ಎಸ್ಎನ್9 :  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಯೋಜನೆಯಡಿ ಕರ್ನಾಟಕ ಪಬ್ಲಿಕ್‌ ಶಾಲೆ (ಕೆ.ಪಿ.ಎಸ್) ಶಾಲೆಗಳನ್ನು ವಿಲೀನಗೊಳಿಸುವ ಮತ್ತು ಮುಚ್ಚುವ ಸಾಧ್ಯತೆಯ ವಿರುದ್ಧ ಎಐಡಿಎಸ್‌ಓ ಹಾಸನ ಘಟಕದ ನೇತೃತ್ವದಲ್ಲಿ ಶುಕ್ರವಾರ ನಗರದ ಹೇಮಾವತಿ ಪ್ರತಿಮೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ತಜ್ಞರಿಂದ ನಡೆದ ಪ್ರಬಲ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ವಿಲೀನ ಅಥವಾ ಮುಚ್ಚುವ ಕಾರ್ಯ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದರೂ, ಈಗ ಮತ್ತೆ ಹೊಸ ಹೆಸರಿನಲ್ಲಿ ಕೇಂದ್ರೀಕೃತ ಶಾಲಾ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಸರ್ಕಾರಿ ಶಾಲಾ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯ ಸರ್ಕಾರದ ಯೋಜನೆಯಡಿ ಕರ್ನಾಟಕ ಪಬ್ಲಿಕ್‌ ಶಾಲೆ (ಕೆ.ಪಿ.ಎಸ್) ಶಾಲೆಗಳನ್ನು ವಿಲೀನಗೊಳಿಸುವ ಮತ್ತು ಮುಚ್ಚುವ ಸಾಧ್ಯತೆಯ ವಿರುದ್ಧ ಎಐಡಿಎಸ್‌ಓ ಹಾಸನ ಘಟಕದ ನೇತೃತ್ವದಲ್ಲಿ ಶುಕ್ರವಾರ ನಗರದ ಹೇಮಾವತಿ ಪ್ರತಿಮೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕಿ ಚೈತ್ರ, ಸರ್ಕಾರವು ರಾಜ್ಯದಲ್ಲಿ 700 ಕರ್ನಾಟಕ ಪಬ್ಲಿಕ್‌ ಶಾಲೆ (ಕೆ.ಪಿ.ಎಸ್) ಶಾಲೆಗಳ ೩-೫ ಕಿಮೀ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲಾಗುತ್ತದೆ ಎಂಬುದನ್ನು ಸರ್ಕಾರಿ ಆದೇಶವೇ ಸ್ಪಷ್ಟಪಡಿಸುತ್ತದೆ. ಇದು ಮುಖವಾಡದಂತೆ ಕಾಣುವ ಈ ಯೋಜನೆಯ ನಿಜ ಉದ್ದೇಶ ಗ್ರಾಮೀಣ ಮತ್ತು ಸಣ್ಣ ಶಾಲೆಗಳ ಅಸ್ತಿತ್ವವನ್ನೇ ಅಪಾಯಕ್ಕೆ ತಳ್ಳುವುದು ಎಂದು ಅವರು ಆಕ್ಷೇಪಿಸಿದರು.

ರಾಜ್ಯ ಸರ್ಕಾರವು ಭವಿಷ್ಯದಲ್ಲಿ ೫೯೦೦ ಕೆಪಿಎಸ್‌ ಶಾಲೆಗಳನ್ನು ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಸ್ಥಾಪಿಸುವ ಯೋಜನೆ ಹೊಂದಿರುವುದರಿಂದ, ಈ ಹೆಜ್ಜೆಯಿಂದ ಸುಮಾರು ೪೦,೦೦೦ ಸರ್ಕಾರಿ ಶಾಲೆಗಳು ಸೇರಿದಂತೆ ಹಲವು ಸರ್ಕಾರಿ ಪದವಿ ಕಾಲೇಜುಗಳೂ ಮುಚ್ಚುವ ಅಪಾಯ ಎದುರಿಸಬೇಕಾಗುತ್ತದೆ ಎಂದು ಚೈತ್ರ ಗಂಭೀರವಾಗಿ ಎಚ್ಚರಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ತಜ್ಞರಿಂದ ನಡೆದ ಪ್ರಬಲ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ವಿಲೀನ ಅಥವಾ ಮುಚ್ಚುವ ಕಾರ್ಯ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದರೂ, ಈಗ ಮತ್ತೆ ಹೊಸ ಹೆಸರಿನಲ್ಲಿ ಕೇಂದ್ರೀಕೃತ ಶಾಲಾ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಸರ್ಕಾರಿ ಶಾಲಾ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳ ಮರುನಾಮಕರಣ ಅಥವಾ ಪುನರ್‌ರಚನೆ ಅಲ್ಲ, ಬದಲಾಗಿ ಪ್ರತಿಯೊಂದು ಶಾಲೆಯನ್ನು ಪರ್ಯಾಯ ಶಿಕ್ಷಕರು, ಸೂಕ್ತ ಮೂಲಸೌಕರ್ಯ ಕಲಿಕಾ ಸಾಮಗ್ರಿಗಳು ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯೊಂದಿಗೆ ಬಲಪಡಿಸುವುದು ಎಂಬುದನ್ನು ಚೈತ್ರ ಒತ್ತಿ ಹೇಳಿದರು. ಶಿಕ್ಷಣವು ಒಂದು ಮೂಲಭೂತ ಹಕ್ಕು ಮತ್ತು ಸಾಮಾಜಿಕ ಜವಾಬ್ದಾರಿ; ಇದನ್ನು ವೆಚ್ಚ ಕಡಿತ ಅಥವಾ ಕಾರ್ಪೊರೇಟ್ ಶೈಲಿಯ ನಿರ್ವಹಣೆಗೆ ಬಲಿಕೊಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಕೆಪಿಎಸ್‌-ಮಾಗ್ನಟ್ ಯೋಜನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ, ಕರ್ನಾಟಕದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ನಾಗರಿಕರು ಸಾರ್ವಜನಿಕ ಶಿಕ್ಷಣ ರಕ್ಷಣೆಗೆ ಒಂದು ಪ್ರಬಲ ಸಾಮೂಹಿಕ ಚಳವಳಿಯನ್ನು ನಿರ್ಮಿಸಬೇಕೆಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಸಂಚಾಲಕಿ ಚೈತ್ರ, ಸಹ ಸಂಚಾಲಕಿ ಸುಷ್ಮಾ, ಕಾರ್ಯಕರ್ತರಾದ ಮೋಹನ್, ಅಭಿಷೇಕ್, ಆರ್ಯನ್, ಧನರಾಜ್, ಚಿಂತನ, ರಂಗನಾಥ್, ದಿವ್ಯ, ಗೀತಾಂಜಲಿ, ನಿಶಾ ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ