ಕನ್ನಡಪ್ರಭ ವಾರ್ತೆ ರಾಯಚೂರು ರೈಲ್ವೆ ಇಲಾಖೆ ಮತ್ತು ವಿದ್ಯುತ್ ಖಾಸಗೀಕರಣವನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಸ್ಥಳೀಯ ರೈಲು ನಿಲ್ದಾಣದ ಮುಂದೆ ಸೇರಿದ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ರೈಲ್ವೆ ವ್ಯವಸ್ಥಾಪಕರ ಮೂಲಕ ಪ್ರಧಾನಿಯವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಖಾಸಗೀಕರಣದ ನೀತಿಗಳನ್ನು ಜಾರಿ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಭಾರತೀಯ ರೈಲ್ವೆ ನಮ್ಮ ಆರ್ಥಿಕತೆಯ ಜೀವಾಳವಾಗಿದೆ. ದೇಶಾದ್ಯಂತ 7300 ರೈಲ್ವೆ ನಿಲ್ದಾಣಗಳ ಮೂಲಕ 13452 ಪ್ರಯಾಣಿಕ ರೈಲುಗಳು ಸಂಚರಿಸುತ್ತಿವೆ. 2.40 ಕೋಟಿ ಪ್ರಯಾಣಿಕರು ಪ್ರತಿದಿನ ಸಂಚರಿಸುತ್ತಾರೆ. ಆಹಾರ ಧಾನ್ಯಗಳು, ಅಗ್ಯವಸ್ತುಗಳು, ಕೃಷಿ ಮತ್ತು ಕೈಗಾರಿಕ ಉತ್ಪನ್ನಗಳು ಸೇರಿದಂತೆ 1.42 ಶತ ಕೋಟಿ ಮೆಟ್ರಿಕ್ ಟನ್ ಸರಕು ನಿತ್ಯ ಸಾಗಣೆಯಾಗುತ್ತದೆ. ಇಂತಹ ದೊಡ್ಡ ಸಾರಿಗೆ ವ್ಯವಸ್ಥೆ ಖಾಸಗೀಕರಣ ಮಾಡಲು ಹೊರಟ ಕೇಂದ್ರ ಸರ್ಕಾರದ ಧೋರಣೆ ಜನವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ಸೌಲಭ್ಯ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯುವಲ್ಲಿ ಕಾರ್ಪೋರೇಟ್‌ಗಳ ಕಿಂಚಿತ್ತು ಕಾಣಿಕೆ ಇಲ್ಲ. ಕೆಂದ್ರ ಸರ್ಕಾರವು ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಲು ಮುಂದಾಗಿದೆ. ಬಿಬೇಕ್ರಾಯ್ ಸಮಿತಿ ಶಿಫಾರಸ್ಸಿನಂತೆ ರೈಲ್ವೆಯನ್ನು ನಾಲ್ಕು ಭಾಗಗಳಾಗಿ ವಿಭಜಿಸಿ ಖಾಸಗೀಕರಣ ಗೊಳಿಸಲು ಮುಂದಾಗಿದೆ. ಇದರಿಂದ ಖಾಸಗಿ ಕಂಪನಿಗಳಿಗೆ ಲಾಭವಾಗಲಿದೆ ಎಂದರು. ಇಡೀ ರೈಲ್ವೆ ವ್ಯವಸ್ಥೆಯನ್ನು ಹಾಳು ಮಾಡುವ ಹುನ್ನಾರವಾಗಿದೆ. ಇದರಿಂದ ಪ್ರಯಾಣಿಕ ದರದಲ್ಲಿ ಹೆಚ್ಚಳವಾಗಲಿದೆ. ಖಾಸಗೀಕರಣದ ನಂತರ ಪ್ರಯಾಣ ದರದ ಸಬ್ಸಿಡಿ ತೆಗೆದು ಹಾಕಿ ಶೇ.100ರಷ್ಟು ಹಣ ಪಾವತಿಸಬೇಕಾಗುತ್ತದೆ. ಈಗಾಗಲೇ ಹಲವು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಟಿಕೆಟ್ ದರ 50 ರು.ಗೆ ಹೆಚ್ಚಿಸಲಾಗಿದೆ. ಅಲ್ಲದೇ, ಮುಖ್ಯವಾಗಿ ರೈಲ್ವೆ ಕಾರ್ಮಿಕರ ಸಂಖ್ಯೆ ಕಡಿತಗೊಳಿಸುವುದು ಹೊಸ ಆರ್ಥಿಕ ನೀತಿಗಳ ಮೊದಲ ತೀರ್ಮಾನವಾಗಿದೆ. ಇದರಿಂದ ಕಾರ್ಮಿಕರು ಅತಂತ್ರಗೊಳ್ಳುವರು ಎಂದು ದೂರಿದರು. ಇನ್ನೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿದ್ದು, ಇದನ್ನು ಕೈಬಿಡಬೇಕು. ಒಂದು ವೇಳೆ ವಿದ್ಯುತ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದರೆ ಖಾಸಗಿ ಸಂಸ್ಥೆಗಳು ಗ್ರಾಹಕರಿಗೆ ಹೆಚ್ಚಿನ ದರ ವಿಧಿಸುತ್ತವೆ. ಪ್ರೀಪೇಡ್ ಸ್ಮಾರ್ಟ್ ಮೀಟರ್ ಅಳವಡಿಸಿ ರೀಚಾರ್ಜ್ ಮಾಡಬೇಕಿದೆ. ಬಿಲ್ ಕಟ್ಟದಿದ್ದರೆ ಕೂಡಲೇ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಇಂತಹ ಜನವಿರೋಧಿ ನೀತಿಗಳನ್ನು ವಿದ್ಯುತ್ ಖಾಸಗೀಕರಣ ನೀತಿಯಲ್ಲಿ ಅಳವಡಿಸಲಾಗಿದೆ. ಈ ನಿಟ್ಟಿನಲ್ಲಿ ರೈಲ್ವೆ ಮತ್ತು ವಿದ್ಯುತ್ ಖಾಸಗೀಕರಣ ನೀತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷೆ ಎಚ್.ಪದ್ಮಾ, ಕಾರ್ಯದರ್ಶಿ ಡಿ.ಎಸ್.ಶರಣಸವ, ಖಜಾಂಚಿ ಶಬ್ಬೀರ್ ಜಾಲಹಳ್ಳಿ, ಮುಖಂಡರಾದ ಪಿ.ಗಿರಿಯಪ್ಪ, ಪ್ರವೀಣರೆಡ್ಡಿಗುಂಜಳ್ಳಿ, ವರಲಕ್ಷ್ಮೀ, ರಂಗಮ್ಮ, ಅನ್ವರ, ಶರಣಪ್ಪ, ಜಿಲಾನಿ ಪಾಷಾ, ಮರಿಲಿಂಗ, ಭಾಸ್ಕರ್, ಗೋಕುರಮ್ಮ, ಶರಣಮ್ಮ, ಇಂದಿರಾ, ಜೆಂಬಣ್ಣ, ರುದ್ರಪ್ಪ ನಾಯಕ ಸೇರಿ ನೂರಾರು ಕಾರ್ಮಿಕರು ಇದ್ದರು. ----- 03ಕೆಪಿಆರ್ಸಿಆರ್03: ರಾಯಚೂರಿನ ರೈಲು ನಿಲ್ದಾಣದ ಮುಂದೆ ರೈಲ್ವೆ ಮತ್ತು ವಿದ್ಯುತ್ ಖಾಸಗೀಕರಣ ಖಂಡಿಸಿ ಸಿಐಟಿಯು ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.