ಕನ್ನಡಪ್ರಭ ವಾರ್ತೆ ವಿಜಯಪುರ
ಕೊಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯೆಯ ಮೇಲಿನ ಅತ್ಯಾಚಾರ ಕೊಲೆ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿಯನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಒ) ಹಾಗೂ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ವಿಜಯಪುರ ಜಿಲ್ಲಾ ಸಮಿತಿಗಳು ಖಂಡಿಸಿ ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.ಬಾಂಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಎನ್.ಯು.ಸಾರವಾಡ ಮಾತನಾಡಿ, ಆ.8ರಂದು ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ ಟ್ರೈನಿ ವೈದ್ಯೆಯ ಮೃತ ದೇಹವು ಶುಕ್ರವಾರ ಬೆಳಗ್ಗೆ ಕಾಲೇಜಿನ 3ನೇ ಮಹಡಿಯ ಸೆಮಿನಾರ್ ಹಾಲಿನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುತ್ತಿಗೆ ಮೂಳೆ ಮುರಿದು, ಕಣ್ಣು, ಬಾಯಿ, ಖಾಸಗಿ ಅಂಗದಲ್ಲೂ ರಕ್ತಸ್ರಾವ ಆಗುವಷ್ಟು ಭೀಕರವಾದ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ವರದಿಯಾಗಿದೆ. ಇದು ದೇಶದ ನಾಗರಿಕರಲ್ಲಿ ತೀವ್ರವಾದ ಆತಂಕ, ಗಾಬರಿ ಮತ್ತು ಆಘಾತವನ್ನುಂಟು ಮಾಡಿದೆ ಎಂದರು.ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ ಮಾತನಾಡಿ, ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಅಮಾನುಷ ಕೊಲೆ ಪ್ರಕರಣವು ಅತ್ಯಂತ ಆಘಾತಕಾರಿಯಾಗಿದ್ದು, ಅಪರಾಧಿಗಳನ್ನು ಬಂಧಿಸಿ ನಿದರ್ಶನಿಯ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.ಎಐಡಿವೈಒನ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ವೈದ್ಯೆ ವಿದ್ಯಾರ್ಥಿನಿಯ ಮೇಲಾದ ಕೃತ್ಯದ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಏಕಾಏಕಿ ಸಮಾಜಘಾತುಕ ಶಕ್ತಿಗಳು ದಾಳಿ ಮಾಡಿದ್ದಾರೆ. ಸಾಕ್ಷ್ಯವನ್ನು ನಾಶಪಡಿಸುವ ಮತ್ತು ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಮತ್ತು ಪ್ರತಿಭಟನಾಕಾರರ ಮನಸ್ಸಿನಲ್ಲಿ ಭಯದ ಭಾವನೆಯನ್ನು ಹುಟ್ಟಿಸಲು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿಗೆ ನುಗ್ಗಿ ಧ್ವಂಸಗೊಳಿಸಿದ್ದಾರೆ. ಆದ್ದರಿಂದ ವಿದ್ಯಾರ್ಥಿ ಯುವಜನತೆ, ಮಹಿಳೆಯರು ಹಾಗೂ ಈಡಿ ನಾಗರಿಕ ಸಮಾಜ ಈ ಬರ್ಬರ ಘಟನೆಯ ವಿರುದ್ಧ ಹೋರಾಡಬೇಕೆಂದರು.ವಿದ್ಯಾರ್ಥಿ ಶಾಶ್ವತ ತೇರದಾಳ ಮಾತನಾಡಿ, ತಾಯಿ ಸಮಾನರಾದ ಮಹಿಳೆಯರಿಗೆ ನಮ್ಮ ಸಮಾಜದಲ್ಲಿ ರಕ್ಷಣೆ ಇಲ್ಲದಿರುವದು ಬಹಳ ನೋವಿನ ವಿಷಯ. ಇಂತಹ ಘಟನೆಯ ವಿರುದ್ದ ನಾವೆಲ್ಲ ಒಂದಾಗಿ ಹೋರಾಡಬೇಕು ಎಂದು ಮನವಿ ಮಾಡಿದರು.ಇನ್ನೋರ್ವ ವಿದ್ಯಾರ್ಥಿ ಶಶಾಂಕ ಪಾಟೀಲ ಮಾತನಾಡಿ, ಮಹಿಳೆಯರಿಗೆ ಯಾರು ಸ್ವತಂತ್ರ ತಂದು ಕೊಡುವುದಿಲ್ಲ, ತಾವೇ ಗಳಿಸಬೇಕು. ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿಯವರ ಆದರ್ಶ ಜೀವನ ಹೋರಾಟದಿಂದ ಸ್ಫೂರ್ತಿ ತೆಗೆದುಕೊಂಡು ನಾವು ಈ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು ಎಂದು ಕೋರಿದರು. ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಡಿವೈಒನ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ ವಹಿಸಿದ್ದರು. ಪ್ರತಿಭಟನೆಯಲ್ಲಿ ಉಪನ್ಯಾಸಕಾರ ರಣಜಿತ್ ಜಾಧವ, ಸಲ್ಮಾನ ಬಗಲಿ, ವಿದ್ಯಾರ್ಥಿಗಳಾದ ಅಂಜಲಿ ಫರನಾಕರ, ಸ್ನೇಹಾ ಸಾಲಗಲ, ನೇಹಾ ಪವಾರ, ಅಶ್ವಿನಿ ಚವ್ಹಾಣ, ಈರಮ್ಮ ಹಿರೇಕೊಪ್ಪ, ಅವಿತಾ, ಶ್ವೇತಾ ಕಾಶಿಬಾಯಿ, ರೂಪಾ, ರೇಣುಕಾ ಮುಂತಾದ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.