ನಾಳೆ ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Jun 27, 2024 1:06 AM

ಸಾರಾಂಶ

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ಮುಖಂಡರು, ಕಾರ್ಯಕರ್ತರು, ವಿವಿಧ ಮೋರ್ಚಾ ಪದಾಧಿಕಾರಿಗಳು, ಹಾಲಿ-ಮಾಜಿ ಜನಪ್ರತಿನಿಧಿಗಳು ಭಾಗವಹಿಸುವರು ಎಂದರು.

- ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ ಹೇಳಿಕೆ । ಸಿಎಂ ರಾಜೀನಾಮೆಗೆ ಒತ್ತಾಯ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸರ್ಕಾರಿ ಹಣ ವರ್ಗಾವಣೆ ಗೋಲ್‌ಮಾಲ್‌ ವಿರೋಧಿಸಿ, ಪ್ರಕರಣದ ಉನ್ನತಮಟ್ಟದ ತನಿಖೆಗೆ ಒತ್ತಾಯಿಸಿ ಬಿಜೆಪಿ ಎಸ್‌ಟಿ ಮೋರ್ಚಾದಿಂದ ಜೂ.28ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಯುವ ಮುಖಂಡ ಟಿ.ಶ್ರೀನಿವಾಸ ದಾಸಕರಿಯಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ಮುಖಂಡರು, ಕಾರ್ಯಕರ್ತರು, ವಿವಿಧ ಮೋರ್ಚಾ ಪದಾಧಿಕಾರಿಗಳು, ಹಾಲಿ-ಮಾಜಿ ಜನಪ್ರತಿನಿಧಿಗಳು ಭಾಗವಹಿಸುವರು ಎಂದರು.

ನಿಗಮದಲ್ಲಿ ಸುಮಾರು ₹187 ಕೋಟಿ ಹಣ ಅಕ್ರಮ ವರ್ಗಾವಣೆಯಾಗಿದೆ. ನಿಗಮ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಪದ್ಮನಾಭ ಅವ್ಯವಹಾರದಲ್ಲಿ ತಮ್ಮ ಸಹಿ ಪೋರ್ಜರಿ ಮಾಡಿದ್ದಾರೆಂಬ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಗರಣಕ್ಕೆ ಹೊಣೆಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸಚಿವ ನಾಗೇಂದ್ರ ರಾಜೀನಾಮೆಯೊಂದೇ ನಿಗಮದ ಅವ್ಯವಹಾರಕ್ಕೆ ಪರಿಹಾರವೂ ಅಲ್ಲ. ಇದರ ಹಿಂದಿರುವ ಕಾಣದ ಕೈಗಳು ಮೊದಲು ಹೊರಗೆ ಬರಬೇಕು. ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಬಿಡುಗಡೆಯಾದ ಹಣದಲ್ಲಿ ಅವ್ಯವಹಾರ ಎಸಗಿ, ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ದ್ರೋಹ ಬಗೆದಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹಿಂದುಳಿದ ವರ್ಗಗಳ ಸಮುದಾಯದ ವಿವಿಧ ಅಭಿವೃದ್ಧಿ ಯೋಜನೆಗೆ ಮೀಸಲಿಟ್ಟಿದ್ದ ಸುಮಾರು ₹24 ಸಾವಿರ ಕೋಟಿಗಳನ್ನು ಕಾಂಗ್ರೆಸ್ ಸರ್ಕಾರ ಇತರೆ ಯೋಜನೆಗೆ ಬಳಸಿಕೊಂಡಿದ್ದೇ ಇದಕ್ಕೆ ಸಾಕ್ಷಿ ಎಂದು ದೂರಿದರು.

ಪರಿಶಿಷ್ಟ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ಘೋರ ಅನ್ಯಾಯ ಮಾಡಿದೆ. ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಸಚಿವರ ಮೌಖಿಕ ಆದೇಶ ಎಂಬುದಾಗಿಯೂ ಬರೆದಿದ್ದಾರೆ. ಇದುವರೆಗೂ ಈ ಪ್ರಕರಣದಲ್ಲಿ ಯಾವುದೇ ತನಿಖಾ ಸಂಸ್ಥೆಯಿಂದ ಸಚಿವರನ್ನು ವಿಚಾರಣೆಗೆ ಒಳಪಡಿಸಿಲ್ಲ. ದುರಂತವೆಂದರೆ, ಎಸ್‌ಟಿ ಮೀಸಲು ಕ್ಷೇತ್ರಗಳಿಂದ ಗೆದ್ದ ಕರ್ನಾಟಕದ ಶಾಸಕರೇ ಪರಿಶಿಷ್ಟ ಪಂಗಡಕ್ಕೆ ಇಷ್ಟೊಂದು ಅನ್ಯಾಯ ಆಗಿದ್ದರೂ ಮೌನವಾಗಿರುವುದು ಇಡೀ ಸಮುದಾಯಕ್ಕೆ ಮಾಡಿರುವ ದ್ರೋಹವಾಗಿದೆ ಎಂದು ಕಿಡಿಕಾರಿದರು.

ಮುಖಂಡರಾದ ಎನ್.ಲೋಕೇಶ, ಲೋಹಿತ್ ಮಂಗೇನಹಳ್ಳಿ, ಆನಗೋಡು ತಿಪ್ಪಣ್ಣ, ಎಚ್.ಪಿ.ದುರುಗೇಶ, ಸಾಲಕಟ್ಟೆ ಸಿದ್ದಪ್ಪ, ಗುಮ್ಮನೂರು ಶ್ರೀನಿವಾಸ, ಹೊಸಹಳ್ಳಿ ವೆಂಕಟೇಶ, ಕೃಷ್ಣಮೂರ್ತಿ, ತರಕಾರಿ ಶಿವು, ತ್ಯಾವಣಿಗೆ ದೊಡ್ಡೇಶ, ರಮೇಶ, ಕೆಂಚನಗೌಡ ಇತರರು ಇದ್ದರು.

- - - ಕೋಟ್‌

ಅತ್ಯಂತ ಭ್ರಷ್ಟ ಸರ್ಕಾರವೆಂಬ ಹಣೆಪಟ್ಟಿಯನ್ನು ಸಿದ್ದರಾಮಯ್ಯ ಸರ್ಕಾರ ಹಚ್ಚಿಸಿಕೊಂಡಿದೆ. ಜನ ಸಮುದಾಯಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಿತ್ಯ ಬೆಳಗಾದರೆ ಸಿಎಂ, ಡಿಸಿಎಂ ಹುದ್ದೆಗಾಗಿ ಗುದ್ದಾಟ, ಅನುದಾನಕ್ಕಾಗಿ ಶಾಸಕರ ಕೂಗು, ರಾಜ್ಯವನ್ನು ಲೂಟಿ ಮಾಡಲೆಂದೇ ಕಾಂಗ್ರೆಸ್ಸಿಗರಲ್ಲಿ ಪೈಪೋಟಿ ನಡೆದಿದೆ

- ಶ್ರೀನಿವಾಸ ದಾಸಕರಿಯಪ್ಪ, ರಾಜ್ಯ ಉಪಾಧ್ಯಕ್ಷ, ಬಿಜೆಪಿ ಎಸ್‌ಟಿ ಮೋರ್ಚಾ

- - -

-26ಕೆಡಿವಿಜಿ2, 3:

ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article