ಕನ್ನಡಪ್ರಭ ವಾರ್ತೆ ಮದ್ದೂರು
ಬಾಂಗ್ಲಾ ದೇಶದಲ್ಲಿ ಮೀಸಲಾತಿ ಹೋರಾಟದ ನೆಪದಲ್ಲಿ ಹಿಂದೂಗಳ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ಬಹು ಸಂಖ್ಯಾತ ಮುಸ್ಲಿಂ ಜನಾಂಗ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರ ಬೆಂಬಲದೊಂದಿಗೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಮೆರವಣಿಗೆ ನಡೆಸಿದರು. ಇದೇ ವೇಳೆ ಬೆಂಗಳೂರು ಮೈಸೂರು ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.
ನಂತರ ಹಳೇ ಎಂ.ಸಿ.ರಸ್ತೆಯಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು ಬಾಂಗ್ಲಾದೇಶದ ಮತಾಂಧ ಮುಸ್ಲಿಂ ಜನಾಂಗದವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರತಿಭಟಕಾರರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.ಆರ್‌ಎಸ್ಎಸ್ ತಾಲೂಕು ಘಟಕದ ಸಂಚಾಲಕ ಶಾಮಿಯಾನ ಗುರುಸ್ವಾಮಿ ಮಾತನಾಡಿ, ಕಳೆದ10 ದಿನಗಳಿಂದ ಬಾಂಗ್ಲಾದೇಶದಲ್ಲಿ ಬಹು ಸಂಖ್ಯಾತರಾಗಿರುವ ಮುಸ್ಲಿಂ ಜನಾಂಗದವರು ಮೀಸಲಾತಿ ಹೋರಾಟದ ನೆಪದಲ್ಲಿ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದು, ಬೌದ್ಧ, ಕ್ರಿಶ್ಚಿಯನ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪಿ.ಮಲ್ಲೇಶ್ ಮಾತನಾಡಿ, ಮಹಿಳೆಯರ ಮೇಲೆ ಅತ್ಯಾಚಾರ, ಮಕ್ಕಳ ಕಗ್ಗೊಲೆ, ಆಸ್ತಿಪಾಸ್ತಿಗಳ ಲೂಟಿ ನಿರಂತರವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಿಸಬೇಕಾದ ವಿಶ್ವಸಂಸ್ಥೆ ಮೌನವಹಿಸಿದೆ ಎಂದು ಕಿಡಿಕಾರಿದರು.ನಮ್ಮ ದೇಶದಿಂದ ಸಹಾಯ ಪಡೆದು ಅಭಿವೃದ್ಧಿ ಹೊಂದುತ್ತಿರುವ ಬಾಂಗ್ಲಾದೇಶ ಹಿಂದೂ ಜನಾಂಗದ ಮೇಲೆ ದುರುದ್ದೇಶ ಪೂರ್ವಕವಾಗಿ ಹಿಂಸೆ ನಡೆಸುತ್ತಿದೆ ಆಕ್ರೋಶ ಹೊರ ಹಾಕಿದರು.
ನಂತರ ಪ್ರತಿಭಟನಾಕಾರರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ನ ಕಾರ್ಯದರ್ಶಿ ರವಿಶಂಕರ್, ಹಿಂದೂ ಜಾಗರಣ ವೇದಿಕೆ ಯೋಗಾನಂದ, ಮಾಜಿ ಸೈನಿಕರ ಸಂಘದ ರಾಜ್ಯ ಗೌರವಾಧ್ಯಕ್ಷ ಸಿಪಾಯಿ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಕೆ.ಪಿ.ಮಲ್ಲರಾಜು, ಮನ್ಮುಲ್ ನಿರ್ದೇಶಕಿ ರೂಪ, ಹಿಂದೂಪರ ಸಂಘಟನೆಗಳ ಮುಖಂಡರಾದ ಸಿ.ಕೆ.ಸತೀಶ್, ನೈದಿಲೆ ಚಂದ್ರು, ಎಂ.ಪಿ.ಮೃತ್ಯುಂಜಯ, ಎಂ.ಸಿ. ಸಿದ್ದು, ದೇವರಾಜು, ರಮೇಶ, ಮಧು ಕುಮಾರ್, ತಿಪ್ಪೂರು ರಾಜೇಶ್, ವಳಗೆರೆಹಳ್ಳಿ ಸುನಿಲ್, ಎಂ.ಸಿ .ಲಿಂಗರಾಜು ಹಲವರು ಪಾಲ್ಗೊಂಡಿದ್ದರು.