ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಹಾಗೂ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ನೀರು ಹರಿಸುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ರೈತರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬಿನಿ ಖಾಲಿಯಾದ ಬೆನ್ನಲ್ಲೇ ಕಡಿಮೆ ಒಳಹರಿವಿನ ನಡುವೆಯೂ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಇಲ್ಲಿನ ರೈತರ ಬೆಳೆಗಳಿಗೆ ನೀರು ಇಲ್ಲದಿದ್ದರೂ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಜಲಾಶಯದ ಒಳಹರಿವಿಗಿಂತ ಹೊರಹರಿವು ಹೆಚ್ಚಾಗಿದೆ ಆತಂಕ ವ್ಯಕ್ತಪಡಿಸಿದರು.ಕೆಆರ್‌ಎಸ್ ಜಲಾಶಯದ ಇಂದಿನ ಒಳಹರಿವು ಕೇವಲ 5426 ಕ್ಯುಸೆಕ್, ತಮಿಳುನಾಡಿಗೆ ಹರಿಸುತ್ತಿರುವ ಹೊರ ಹರಿವು ಬರೋಬ್ಬರಿ 7170 ಕ್ಯುಸೆಕ್ ಹೆಚ್ಚಿದೆ. ದಿನದಿಂದ ದಿನಕ್ಕೆ ಕಾವೇರಿ ನದಿಗೆ ನೀರು ಹರಿಸುವ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆಯ ಕಮ್ಮನಾಯಕನಹಳ್ಳಿ ಮಂಜುನಾಥ್, ಮಹಿಳಾ ಘಟಕ ಅಧ್ಯಕ್ಷೆ ಸೌಭಾಗ್ಯ, ಶೋಭಾ, ಮೈಸೂರು ಜಿಲ್ಲಾಧ್ಯಕ್ಷೆ ಶೈಲಜಾ, ಜಿಲ್ಲಾಧ್ಯಕ್ಷ ಮಲ್ಲೇಶ್, ಕೆ.ರಾಜು, ಕಾಳಪ್ಪ, ಕನ್ನಡಾಂಬೆ ರಕ್ಷಣಾ ವೇದಿಕೆಯ ಹರೀಶ್ ಕಿರಣ್, ಕಿಕ್ಕೇರಿ ಕಿರಣ, ತಾರಾ, ಮಿಥುನ್, ಲಕ್ಷ್ಮಿ, ಗೀತಾ ಸೇರಿದಂತೆ ಹಲವರು ಭಾಗವಹಿಸಿದ್ದರು.