ಕೊಪ್ಪಳ: ನಗರದ ರೈಲ್ವೆ ಗೇಟ್ 63ಕ್ಕೆ ನಿರ್ಮಾಣ ಮಾಡಲಾಗಿರುವ ಸೇತುವ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತ ಮಾಡುವಂತೆ ಆಗ್ರಹಿಸಿ ರೈಲ್ವೆ ಗೇಟ್ 63 ಮೇಲ್ಸೇತುವೆ ಹೋರಾಟ ಸಮಿತಿ ಗುರುವಾರ ಕೊಪ್ಪಳ ನಗರದಲ್ಲಿ ಪ್ರತಿಭಟನೆ ನಡೆಸಿ ಸಂಸದರ ನಿವಾಸದ ಎದುರು ಧರಣಿ ನಡೆಸಿದರು.
ನಗರದ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಶಾಸಕರು, ಸಂಸದರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸೇತುವ ಕಾಮಗಾರಿ, ಕಳೆದೊಂದುವರೆ ವರ್ಷದ ಹಿಂದೆ ಸೇತುವೆ ನಿರ್ಮಾಣ ಮಾಡಿ ಅದಕ್ಕೆ ಬೇಕಾಗಿರುವ ರಸ್ತೆ ಮಾಡದೆ ಸೇತುವೆ ಬಂದ್ ಮಾಡಿರುವುದರ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದ ಹೆದ್ದಾರಿ ಯುದ್ದಕ್ಕೂ ಮೆರವಣಿಗೆಯಲ್ಲಿ ಸಾಗಿ ಕೊಪ್ಪಳ ಬಿ.ಟಿ.ಪಾಟೀಲ್ ನಗರದಲ್ಲಿರುವ ಸಂಸದ ರಾಜಶೇಖರ ಹಿಟ್ನಾಳ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ನಿವಾಸದ ಎದುರು ಧರಣಿ ನಡೆಸಿದರು.ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಸಮಸ್ಯೆಯಾಗಿರುವುದು ನಿಜ. ಇದನ್ನು ಇತ್ಯರ್ಥ ಮಾಡುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಹಿಂದೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ನೀಡಿದೆ, ಆದರೆ, ರೈಲ್ವೆ ಇಲಾಖೆಯ ಅಧಿಕಾರಿಗಳ ತಪ್ಪು ಲೆಕ್ಕಾಚಾರದಿಂದ ಸಮಸ್ಯೆ ನನೆಗುದಿಗೆ ಬಿದ್ದಿದೆ. ಹೀಗಾಗಿ, ಈಗ ಪುನಃ ಪ್ರಸ್ತಾವನೆ ಕಳುಹಿಸಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಅವರು ಸಹ ಪ್ರಸ್ತಾವನೆ ಕಳುಹಿಸಲಿದ್ದಾರೆ. ಪ್ರಸ್ತಾವನೆ ರೈಲ್ವೆ ಇಲಾಖೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟ ನಂತರ ನಾನೇ ರೈಲ್ವೆ ಸಚಿವರನ್ನು ಭೇಟಿಯಾಗಿ ಸಮಸ್ಯೆ ಇತ್ಯರ್ಥ ಮಾಡಲಾಗುವುದು ಎಂದರು.ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಬನ್ನಿಮಠ, ಕಾರ್ಯದರ್ಶಿ ಬಸವರಾಜ ಶೀಲವಂತರ, ಎಸ್.ಜಿ.ಹೊಸಭಾವಿ, ಮೋಯಿದ್, ಗೀತಾ ಪಾಟೀಲ್ ಸೇರಿದಂತೆ ಮೊದಲಾದವರು ಇದ್ದರು.
ಮಹಿಳೆಯರ ಆಕ್ರೋಶ: ಸಂಸದ ರಾಜಶೇಖರ ಹಿಟ್ನಾಳ ಎದುರು ಧರಣಿಯಲ್ಲಿ ಭಾಗವಹಿಸಿದ್ದ ನೂರಾರು ಸಂಖ್ಯೆಯ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ತೀವ್ರ ಸಮಸ್ಯೆಯಾಗುತ್ತದೆ. ಸೇತುವೆ ಕಾಮಗಾರಿ ಪೂರ್ಣಗೊಳಿಸುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದರು.