ನವಲಗುಂದ: ಈ ವರ್ಷದಲ್ಲೂ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ಬೆಳೆವಿಮೆ, ಬೆಳೆಹಾನಿ ಪರಿಹಾರ ಸ್ಥಾನಿಕವಾಗಿ ಪರಿಶೀಲಿಸಿ ಯೋಗ್ಯ ಪರಿಹಾರಕ್ಕೆ ಆಗ್ರಹಿಸಿ ರೈತ ಹೋರಾಟಗಾರರು ಹಾಳಾದ ಬೆಳೆ ಸಮೇತ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, ರೈತರಿಗೆ ಅನ್ಯಾಯವಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರ್ಕಾರಗಳೇ ಜವಾಬ್ದಾರಿ. ಬೆಳೆವಿಮೆ ಪರಿಹಾರ ನೀಡುವಲ್ಲಿ ತಾಲೂಕಿನ ರೈತರಿಗೆ ವಿಮಾ ಕಂಪನಿಯವರಿಂದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2024-25 ರಲ್ಲಿ ಎನ್ ಡಿಆರ್ ಎಫ್ -ಎಸ್ ಡಿಆರ್.ಎಫ್ ಮಾರ್ಗಸೂಚಿ ಪ್ರಕಾರ ಬೆಳೆಹಾನಿ ಪರಿಹಾರದಲ್ಲಿ ತಾರತಮ್ಯವಾಗಿದ್ದು, ಬಾಕಿ ಉಳಿದ ರೈತರಿಗೆ ಪರಿಹಾರ ಹಣ ನೀಡಬೇಕು ಎಂದರು.ನಂತರ ರೈತ ಮುಖಂಡ ರಘುನಾಥ ನಡುವಿನಮನಿ ಮಾತನಾಡಿ, ಬೆಳೆಹಾನಿ ಹಾಗೂ ವಿಮೆ ಬಗ್ಗೆ ಈಗ ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಅನೇವರಿ ಮಾಡುತ್ತಿದ್ದು ಸರಿಯಲ್ಲ, ಮಳೆಗೆ ಹೆಸರು ಕಾಳುಗಳು ಹಸಿಯಾಗಿದ್ದು ತೂಕ ಬರುತ್ತೆ. ಕಾಳು ಒಣಗಿದ ಮೇಲೆ ಅನೇವರಿ ಮಾಡಿ ಎಷ್ಟು ಹಾನಿಯಾಗಿದೆ ಎಂದು ತಿಳಿಯುತ್ತದೆ ಎಂದರು.