ಕುಶಾಲನಗರ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

KannadaprabhaNewsNetwork |  
Published : Feb 21, 2025, 12:46 AM IST
ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕೊಡಗು ವಿಶ್ವವಿದ್ಯಾಲಯ ರದ್ದುಗೊಳಿಸುವ ಸರ್ಕಾರದ ಚಿಂತನೆಯನ್ನು ಖಂಡಿಸಿ ಕುಶಾಲನಗರ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ವಿಶ್ವವಿದ್ಯಾಲಯ ರದ್ದುಗೊಳಿಸುವ ಸರ್ಕಾರದ ಚಿಂತನೆಯನ್ನು ಖಂಡಿಸಿ ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕೊಡಗು ವಿವಿ ಹಿತರಕ್ಷಣಾ ಬಳಗ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿ ಅಭಿವೃದ್ಧಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ವಿದ್ಯಾರ್ಥಿ ಪ್ರಮುಖರು ಮಾತನಾಡಿ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕು. ಕೊಡಗು ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸ್ಥಳೀಯವಾಗಿ ನೀಡಿರುವ ಅವಕಾಶವನ್ನು ರದ್ದುಗೊಳಿಸಬಾರದು. ಸರ್ಕಾರ ಈ ಬಗ್ಗೆ ಪರಿಶೀಲಿಸಿ, ಯಾವುದೇ ಕಾರಣಕ್ಕೂ ಕೊಡಗು ವಿವಿಯನ್ನು ರದ್ದುಗೊಳಿಸಬಾರದು ಇತರ ವಿವಿಗೆ ವಿಲೀನ ಗೊಳಿಸಬಾರದು ಎಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಹಿತರಕ್ಷಣ ಬಳಗದ ಪ್ರಮುಖರಾದ ನಟೇಶ್ ಗೌಡ, ಕ್ಷೇತ್ರ ಶಾಸಕರ ಮೂಲಕ ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಇರುವ ವಿಶ್ವವಿದ್ಯಾಲಯದ ಹಿತ ರಕ್ಷಣೆ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.

ವಿದ್ಯಾರ್ಥಿಗಳು ಕುಶಾಲನಗರ ಗಣಪತಿ ದೇವಾಲಯ ಬಳಿ ಸೇರಿ ಮಾನವ ಸರಪಳಿ ರಚಿಸಿ ವಿಶ್ವವಿದ್ಯಾಲಯ ಉಳಿಸುವಂತೆ ಘೋಷಣೆ ಕೂಗಿದರು. ಈ ಸಂಬಂಧ ಪ್ರಮುಖರು ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ತಾಲೂಕು ತಹಸೀಲ್ದಾರ್ ಮೂಲಕ ಸಲ್ಲಿಸಲಾಯಿತು.

ಕೊಡಗು ವಿವಿ ಹಿತ ರಕ್ಷಣಾ ಬಳಗದ ಸಂಚಾಲಕರಾದ ಕೆ ಎಸ್ ಕೃಷ್ಣೇಗೌಡ, ಸದಸ್ಯರಾದ ಎಂ ಎನ್ ಚಂದ್ರಮೋಹನ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಪ್ರಮುಖರಾದ ನವನೀತ್ ಪೊನ್ನೆಟಿ, ಗಂಧರ್ವ ರಿತ್ವಿಕ್, ಕಾರ್ತಿಕ್, ಲಯನ್ ಮತ್ತು ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಮುಖರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ