ಹಾವೇರಿ: ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯದಿಂದಾಗಿ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರವೇಶ ಪತ್ರ ಸಿಗದೇ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ಆರೋಪಿಸಿ, ಪೂರಕ ಪರೀಕ್ಷೆಯಲ್ಲಾದರೂ ಅವಕಾಶ ಕಲ್ಪಿಸುವುದಕ್ಕೆ ಒತ್ತಾಯಿಸಿ ರಾಣಿಬೆನ್ನೂರ ತಾಲೂಕಿನ ಹರನಗಿರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅಭಿಷೇಕ್ ವಿಜಯಕುಮಾರ್ ಜರಮಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ಅಣಕು ಪರೀಕ್ಷೆ ಬರೆಯುವ ಮೂಲಕ ತನ್ನ ಪೋಷಕರೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಸರಿಯಾಗಿ ಶಾಲೆಗೆ ಹೋಗುತ್ತಿದ್ದೆ, ಅರ್ಧ ವಾರ್ಷಿಕ ಸೇರಿದಂತೆ ಮೂರು ಕಿರು ಪರೀಕ್ಷೆಗಳನ್ನು ಬರೆದಿದ್ದೇನೆ. ಜನವರಿ ತಿಂಗಳು ಅನಾರೋಗ್ಯದ ಕಾರಣ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದು ಶಾಲೆಗೆ ರಜೆ ಹಾಕಿದೆ. ಮನೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡು ಎಂದು ಧೈರ್ಯ ಹೇಳಿದ ಗುರುಗಳು ಈಗ ಪ್ರವೇಶ ಪತ್ರ ಬಂದಿಲ್ಲವೆಂದು ಮೋಸ ಮಾಡಿದರು. ದಯವಿಟ್ಟು ಪೂರಕ ಪರೀಕ್ಷೆಯಲ್ಲಾದರೂ ಅವಕಾಶ ಕೊಡಿ ಎಂದು ಅಪಾರ ಜಿಲ್ಲಾಧಿಕಾರಿ ಹಾಗೂ ಡಿಡಿಪಿಐಗೆ ಪರೀಕ್ಷೆ ವಂಚಿತ ವಿದ್ಯಾರ್ಥಿ ಅಭಿಷೇಕ್ ಜರಮಲ್ಲ ಹಾಗೂ ಪೋಷಕರು ಮನವಿ ಮಾಡಿದರು.ವಿದ್ಯಾರ್ಥಿ ತಾಯಿ ಮಲ್ಲಮ್ಮ ಮಾತನಾಡಿ, ಹುಷಾರಿಲ್ಲದ ಕಾರಣ ನನ್ನ ಮಗ ಶಾಲೆಗೆ ಬಂದಿಲ್ಲ, ಆದರೆ ಬಹಳಷ್ಟು ಅಭ್ಯಾಸ ಮಾಡುತ್ತಾನೆ. ನಾವು ಯಾವಾಗಲೂ ಕೇಳಿದಾಗ ಹಾಲ್ ಟಿಕೆಟ್ ಬರುತ್ತೆ ಅಂತಾ ಸುಳ್ಳು ಹೇಳಿ ಮೋಸ ಮಾಡಿದರು ಎಂದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, ಪರೀಕ್ಷೆಯ ಕೊನೆಯ ಹಂತದಲ್ಲಿ ಪ್ರವೇಶ ಪತ್ರ ಬಂದಿಲ್ಲವೆಂದು ವಿದ್ಯಾರ್ಥಿಗೆ ಮೋಸ ಮಾಡಿದ ಮುಖ್ಯೋಪಾಧ್ಯಾಯರ ನಡೆ ಖಂಡನೀಯ. ಜೂನ್ ತಿಂಗಳಿಂದ ಡಿಸೆಂಬರ್ ತನಕ ಕೇವಲ ಶೇ.೫೨ ಹಾಜರಾತಿ ಹೊಂದಿದ್ದಾರೆ ಎಂಬ ನೆಪದಿಂದ ಒಂದು ವರ್ಷದ ವಿದ್ಯಾವಂತ ವಿದ್ಯಾರ್ಥಿಯ ಭವಿಷ್ಯ ಹಾಳಾಗಿದೆ.ಮನವಿ ಸ್ವೀಕರಿಸಿದ ಅಪಾರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಹಾಗೂ ಡಿಡಿಪಿಐ ಸುರೇಶ್ ಹುಗ್ಗಿ ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯ ಇದ್ದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಹಾಗೂ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.