
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಆಟೋ ರಿಕ್ಷಾ ಚಾಲಕರು ತಮ್ಮ ಬಹುದಿನಗಳ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಎಷ್ಟೇ ಮನವಿ ಸಲ್ಲಿಸಿದರೂ ಸ್ಪಂದಿಸದ ಅಧಿಕಾರಿಗಳ ನಡೆಗೆ ಬೇಸತ್ತು, ಇದೇ ಜ. 30ರಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ''''''''ರಕ್ತದಲ್ಲಿ ಪತ್ರ ಬರೆದು'''''''' ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ ಜನಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 7,000ಕ್ಕೂ ಅಧಿಕ ಆಟೋಗಳಿವೆ. ಇದರಿಂದ ನಿಲ್ದಾಣಗಳಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗಿದ್ದು, ಟ್ರಾಫಿಕ್ ಸಮಸ್ಯೆ ಬಿಗಡಾಯಿಸಿದೆ. ಅಲ್ಲದೆ, ಇರುವ ಚಾಲಕರಿಗೆ ದುಡಿಮೆ ಇಲ್ಲದಂತಾಗಿ ಸಂಕಷ್ಟದ ಜೀವನ ನಡೆಸುವಂತಾಗಿದೆ. ಈ ಹಿನ್ನೆಲೆಯಲ್ಲಿ, ಹೊರ ರಾಜ್ಯಗಳ ಮಾದರಿಯಲ್ಲಿ ಮುಂದಿನ ಕನಿಷ್ಠ 5 ವರ್ಷಗಳ ಕಾಲ ಹೊಸ ಆಟೋ ಪರ್ಮಿಟ್ ನೀಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಒಬ್ಬ ವ್ಯಕ್ತಿ 2ಕ್ಕಿಂತ ಹೆಚ್ಚು ಪರ್ಮಿಟ್ ಹೊಂದಿದ್ದರೆ ಕ್ರಮ ಕೈಗೊಳ್ಳಬೇಕು ಮತ್ತು ಪರ್ಮಿಟ್ ನೀಡುವಾಗ ಸ್ಥಳೀಯ ಸಂಸ್ಥೆಗಳ ಅನುಮತಿ ಕಡ್ಡಾಯಗೊಳಿಸಬೇಕು ಎಂಬುದು ಚಾಲಕರ ಪ್ರಮುಖ ಆಗ್ರಹವಾಗಿದೆ.
ಪ್ರಸ್ತುತ ನಗರ ಪ್ರದೇಶಗಳಲ್ಲಿ 7 ಕಿಮೀ ಮತ್ತು ಗ್ರಾಮೀಣ ಭಾಗದಲ್ಲಿ 3 ಕಿಮೀ ಸಂಚಾರಕ್ಕೆ ಮಾತ್ರ ಪರ್ಮಿಟ್ ಅವಕಾಶವಿದೆ. ಆದರೆ, ಜಿಲ್ಲೆಯ ಭೌಗೋಳಿಕ ಸನ್ನಿವೇಶದಲ್ಲಿ ಆಟೋ ನವೀಕರಣ, ಶೋರೂಂ ಅಥವಾ ಆರ್‌ಟಿಒ ಕಚೇರಿಗೆ ತೆರಳಲು ಚಾಲಕರು 20ರಿಂದ 100 ಕಿಮೀ ದೂರ ಕ್ರಮಿಸಬೇಕಾಗುತ್ತದೆ. ಈ ವೇಳೆ ಏನಾದರೂ ಅವಘಡ ಸಂಭವಿಸಿದರೆ ವಿಮೆ ಸಿಗದೆ ಚಾಲಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಪರ್ಮಿಟ್ ವ್ಯಾಪ್ತಿಯನ್ನು ಕನಿಷ್ಠ 50 ಕಿಲೋ ಮೀಟರ್‌ಗೆ ಹೆಚ್ಚಿಸಬೇಕು ಎಂದು ಸಂಘ ಒತ್ತಾಯಿಸಿದೆ.ಜಿಲ್ಲೆಯ ಪ್ರವಾಸಿ ತಾಣಗಳಾದ ಗೋಕರ್ಣ, ದಾಂಡೇಲಿ ಸೇರಿದಂತೆ ಹಲವು ಕಡೆಗಳಲ್ಲಿ ಬಾಡಿಗೆ ಬೈಕ್‌ಗಳ ಹಾವಳಿ ಮಿತಿಮೀರಿದೆ. ಇದರಿಂದ ಅಧಿಕೃತ ಆಟೋ ಚಾಲಕರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಆಟೋ ಚಾಲಕರ ಹಿತಾಸಕ್ತಿ ಕಾಪಾಡಲು ಒಲಾ, ಉಬರ್ ಹಾಗೂ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳಿಗೆ ನೀಡಲಾದ ಅನುಮತಿಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸಭೆ ಕರೆದು ಸಮಸ್ಯೆ ಬಗೆಹರಿಸದಿದ್ದಲ್ಲಿ, ರಾಜ್ಯಾಧ್ಯಕ್ಷರಾದ ಶೇಖರಯ್ಯ ಮಠಪತಿ ಅವರ ನೇತೃತ್ವದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಜಿಲ್ಲಾಧ್ಯಕ್ಷ ವಿಶ್ವನಾಥ ಎಸ್. ಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಎಚ್ಚರಿಕೆ ನೀಡಿದ್ದಾರೆ.