ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಿರಿಯ ರೈತ ಮುಖಂಡ ಎಂ.ವಿ.ರಾಜೇಗೌಡ ಮಾತನಾಡಿ, ತಾಲೂಕು ಕಚೇರಿಯಲ್ಲಿ ಈ ಹಿಂದೆ ಕರ್ತವ್ಯದಲ್ಲಿದ್ದ ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್.ರವಿ ಭ್ರಷ್ಟನಾಗಿ ಸುಮಾರು 241 ಕಡತಗಳನ್ನು ವಿಲೇವಾರಿ ಮಾಡದೆ ತನ್ನಲ್ಲಿಯೇ ಬಾಕಿ ಉಳಿಸಿಕೊಂಡಿದ್ದರಿಂದ ಮೇಲಾಧಿಕಾರಿಗಳು ಸೇವೆಯಿಂದ ಅಮಾನತ್ತು ಮಾಡಿದ್ದರೂ ಕೆಎಟಿ ಆದೇಶದ ಮೇರೆಗೆ ಮತ್ತೆ ಮುಂದುವರಿಸಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತದನಂತರ ಸಾರ್ವಜನಿಕರ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಎಸಿ ಶ್ರೀನಿವಾಸ್ ಸರ್ಕಾರಕ್ಕೆ ಸಲ್ಲಿಸಿ ವರದಿ ಆಧಾರದ ಮೇಲೆ ಬಿ.ಆರ್.ರವಿಯನ್ನು ವರ್ಗಾವಣೆ ಮಾಡಲಾಗಿತ್ತು. ಕಡ್ಡಾಯ ನಿರೀಕ್ಷಣಾ ಅವಧಿಯಲ್ಲಿರುವ ರವಿ ಮತ್ತೆ ಕೆಎಟಿ ಮೂಲಕ ತಾಲೂಕು ಕಚೇರಿಗೆ ಮರಳುತ್ತಿದ್ದಾರೆ. ಕಡತ ವಿಲೇವಾರಿಗೆ ರೈತರಿಂದ ಹಣಕ್ಕೆ ಪೀಡಿಸಿ ಕಿರುಕುಳ ನೀಡುತ್ತಿದ್ದವರನ್ನು ಮತ್ತೆ ಕೆ.ಆರ್.ಪೇಟೆಗೆ ನಿಯೋಜಿಸಬಾರದು. ಒಂದು ವೇಳೆ ನಿಯೋಜಿಸಿದರೆ ರೈತರು ಬಿಡುವುದಿಲ್ಲ ಎಂದು ಎಚ್ಚರಿಸಿದರು.ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಮಾತನಾಡಿ, ಶಂಕರ್ ಪೌತಿ ಖಾತೆ ಮಾಡುವಲ್ಲಿ ಗ್ರಾಮ ಲೆಕ್ಕಿಗರು ಸಾಕಷ್ಟು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ನೈಜ ವಾರಸುದಾರರ ಕುಟುಂಬದ ಸದಸ್ಯರ ಹೆಸರಿಗೆ ಪೌತಿ ಖಾತೆ ಮಾಡದೆ ರಕ್ತ ಸಂಬಂಧಿಕರೇ ಅಲ್ಲದ ಇತರರ ಹೆಸರಿಗೆ ಪೌತಿ ಖಾತೆ ಮಾಡಿ ರೈತರು ಕೋರ್ಟ್ ಕಚೇರಿ ಅಲೆಯುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.
ಪುರಸಭೆ ಮಾಜಿ ಸದಸ್ಯ ಡಿ.ಪ್ರೇಂಕುಮಾರ್ ಮಾತನಾಡಿ, ಪಟ್ಟಣದ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಭವನದ ಕಾಮಗಾರಿ ವಿಳಂಭವಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಭವನಗಳನ್ನು ಲೋಕಾರ್ಪಣೆಗೊಳಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಡೀಸಿ ಡಾ.ಕುಮಾರ ಮಾತನಾಡಿ, ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್.ರವಿ ಅವರು ತಂದಿರುವ ಕೆ.ಎ.ಟಿ ಆದೇಶವನ್ನು ನಾವು ಪಾಲಿಸಬೇಕು. ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಮನವಿ ಮಾಡುತ್ತೇನೆ. ಇತರೆ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.