- ಒಳಮೀಸಲಾತಿ ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗೆ ಘೋರ ಅನ್ಯಾಯ: ಸೇವಾಲಾಲ್ ಶ್ರೀ ಸಮಾಧಾನ - - -
ಒಳಮೀಸಲಾತಿ ಹೆಸರಿನಲ್ಲಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳ ಜೊತೆಗೆ ಇನ್ನೂ 63 ಜಾತಿಗಳನ್ನು ಸೇರಿಸಿ, ಶೇ.5 ಮೀಸಲಾತಿ ನೀಡಿ ಅನ್ಯಾಯ ಮಾಡಲಾಗಿದೆ. ಈ ಕ್ರಮ ಖಂಡಿಸಿ ಸೆ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬಂಜಾರ ಗುರಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಎಚ್ಚರಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ನ್ಯಾ.ಸದಾಶಿವ ಆಯೋಗ ಆಧಾರಿತ ಒಳಮೀಸಲಾತಿಯನ್ನು ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಶೇ.04.5 ಘೋಷಿಸಿತ್ತು. ಆದರೆ, ಈಗಿನ ಸರ್ಕಾರ 63 ಸಮುದಾಯಗಳನ್ನು ಪಟ್ಟಿ ಮಾಡಿ, ಶೇ.05 ಒಳ ಮೀಸಲಾತಿ ಘೋಷಿಸಿದೆ. ಇದಕ್ಕಿಂದ ಘೋರ ಅನ್ಯಾಯ ಬೇರೊಂದಿಲ್ಲ. ನಮ್ಮ ಸಮುದಾಯಗಳಿಗೆ ಅನ್ಯಾಯ ಮಾಡುವ ಪಕ್ಷ, ಸರ್ಕಾರಕ್ಕೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದರು.ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ತರಾತುರಿಯಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಒಳ ಮೀಸಲಾತಿ ವರ್ಗೀಕರಣಕ್ಕೆ ಅವಕಾಶವೇ ಇಲ್ಲ. ಇಂದಿಗೂ ಬಂಜಾರ ಸಮುದಾಯದ ಶೇ.70 ಜನರಿಗೆ ಸ್ವಂತ ಸೂರು, ನೆಲೆ ಇಲ್ಲ. ವಲಸೆ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರವು ಲಂಬಾಣಿ, ಭೋವಿ, ಕೊರಚ, ಕೊರಮ ಜನಾಂಗಕ್ಕೆ ಶೇ.4.5 ಮೀಸಲಾತಿ ನೀಡಿದಾಗ ಸಮಾಜದ ಮುಖಂಡರೇ ದಾರಿ ತಪ್ಪಿಸಿದ್ದರು. ಈಗ ಅದೇ ಜನರ ಮತಗಳಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ರಾಜ್ಯವ್ಯಾಪಿ ಆ.29ರಂದು ರಾಜ್ಯ ಸರ್ಕಾರ, ನ್ಯಾ.ನಾಗಮೋಹನ ದಾಸ್ ಆಯೋಗದ ವರದಿ ವಿರುದ್ಧ ಲಂಬಾಣಿ ಸಮುದಾಯ ಸುದ್ದಿಗೋಷ್ಠಿ ಮಾಡುವ ಮೂಲಕ ರಾಜ್ಯಾ ದ್ಯಂತ ಮೊದಲ ಹಂತದಲ್ಲಿ ಹೋರಾಟ ನಡೆಸಲಿದೆ. ಸೆ.10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ, ವಿಧಾನಸೌಧ ಮುತ್ತಿಗೆ ಹಾಕಲಿದ್ದೇವೆ. ಸೆ.10 ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದು ಹೇಳಿದರು.
- - -
- ಎಂ.ಬಸವರಾಜ ನಾಯ್ಕ, ಮಾಜಿ ಅಧ್ಯಕ್ಷ, ತಾಂಡಾ ಅಭಿವೃದ್ಧಿ ನಿಗಮ.
(ಕೋಟ್) ನಮ್ಮ ನಾಲ್ಕೂ ಸಮುದಾಯಗಳಿಗೆ ಆದ ಅನ್ಯಾಯವನ್ನು ಖಂಡಿಸಿ ಸೆ.6ರಂದು ಬೆಳಿಗ್ಗೆ 10.30ಕ್ಕೆ ದಾವಣಗೆರೆ ಅಂಬೇಡ್ಕರ್ ವೃತ್ತದಿಂದ ಎಸಿ ಕಚೇರಿವರೆಗೆ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಿ, ಸೆ.10ರಂದು ಬೆಂಗಳೂರಿನಲ್ಲಿ ಪ್ರತಿಭಟಿಸಲಾಗುವುದು. ವಿಧಾನಸೌಧಕ್ಕೂ ಮುತ್ತಿಗೆ ಹಾಕಲಿದ್ದೇವೆ.
- - -
ದಾವಣಗೆರೆಯಲ್ಲಿ ಗುರುವಾರ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.