ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಬೇಡ ಜಂಗಮ ಕ್ಷೇಮಾಭಿವೃದ್ದಿ ಸಂಘದಿಂದ ಪ್ರತಿಭಟನೆ

KannadaprabhaNewsNetwork | Published : Apr 21, 2024 2:15 AM

ಸಾರಾಂಶ

ನೇಹಾ ಹತ್ಯೆ ಖಂಡನೀಯವಾಗಿದ್ದು, ಇಡೀ ಸಮಾಜವೇ ಬೆಚ್ಚಿಬೀಳಿಸುವಂತ ಕೃತ್ಯ. ಇಂತಹ ಕೃತ್ಯ ಎಸಗಿದ ಎಲ್ಲ ಆರೋಪಿಗಳಿಗೆ ಜಾಮೀನು ಸಿಗದಂತೆ ಪೊಲೀಸರು ನ್ಯಾಯಸಮ್ಮತವಾಗಿ ವರದಿ ನೀಡಬೇಕು ಎಂದು ಬೇಡ ಜಂಗಮ ಕ್ಷೇಮಾಭಿವೃದ್ದಿ ಸಂಘ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ತಾಲೂಕು ಬೇಡ ಜಂಗಮ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪಟ್ಟಣದ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿ ನಗರದ ಬಿವಿಟಿ ಕಾಲೇಜಿನ ಎಂ.ಸಿ.ಎ. ವಿದ್ಯಾರ್ಥಿನಿ ನೇಹಾಳನ್ನು ಹಾಡಹಗಲೇ ಕಾಲೇಜಿನ ಆವರಣದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಆರೋಪಿ ಫಯಾಜ್ ನನ್ನು ಈಗಾಗಲೇ ಪೋಲೀಸರು ಬಂಧಿಸಿದ್ದಾರೆ. ಈತನ ಜೊತೆ ಇತರೆ ೪ ಜನ ಸಹಪಾಠಿಗಳು ಇದ್ದರೆಂದು ತಿಳಿದು ಬಂದಿದ್ದು, ಅವರನ್ನೂ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ನೇಹಾ ಹತ್ಯೆ ಖಂಡನೀಯವಾಗಿದ್ದು, ಇಡೀ ಸಮಾಜವೇ ಬೆಚ್ಚಿಬೀಳಿಸುವಂತ ಕೃತ್ಯ. ಇಂತಹ ಕೃತ್ಯ ಎಸಗಿದ ಎಲ್ಲ ಆರೋಪಿಗಳಿಗೆ ಜಾಮೀನು ಸಿಗದಂತೆ ಪೊಲೀಸರು ನ್ಯಾಯಸಮ್ಮತವಾಗಿ ವರದಿ ನೀಡಬೇಕು, ತನಿಖಾಧಿಕಾರಿಗಳಾದ ಪೋಲೀಸರು ಶೀಘ್ರ ತನಿಖೆ ಮುಗಿಸಿ ಒಂದು ವಾರದೊಳಗೆ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಬೇಕು.

ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರು ಕುಟುಂಬಕ್ಕೆ ಸಾಂತ್ವನದ ಹೇಳಿಕೆ ನೀಡದೇ ಅಪಮಾನಕರವಾದ, ಬೇಜವಾಬ್ದಾರಿ ಹೇಳಿಕೆ ನೀಡಿ ತಮ್ಮ ಹುದ್ದೆಗೆ ಕಳಂಕ ತಂದಿದ್ದಾರೆ. ಈ ಕೂಡಲೇ ಸಮಾಜದ ಕ್ಷಮೆ ಕೇಳಿ ಈ ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆಗೆ ಕ್ರಮ ಕೈಗೋಳ್ಳಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕು ಬೇಡ ಜಂಗಮ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕರಬಸಯ್ಯ ಬಸರೀಹಳ್ಳಿಮಠ, ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ನಾಗಯ್ಯ ನರಗುಂದಮಠ, ಚನ್ನೇಶಶಾಸ್ತ್ರಿ ಮಠದ, ಎಂ.ಸಿ. ಮಠದ, ಧನಂಜಯ ಹಿರೇಮಠ, ಕೊಟ್ರಯ್ಯ ಹಿರೇಮಠ, ಬಸವರಾಜಯ್ಯ ಕಬ್ಬೂರಮಠ ಗೀತಾ ಸಾಲಿಮಠ, ಶಾಂತಯ್ಯ ಮಠದ, ಪ್ರಶಾಂತ ಮಠದ, ರುದ್ರಯ್ಯ ಮಠದ, ಬಸವರಾಜಯ್ಯ ಹಿರೇಮಠ, ಶಿವಾನಂದ ಪೂಜಾರ, ಗಿರೀಶ ಪೂಜಾರ, ಜಗದೀಶ ಹಿರೇಮಠ, ಚಂದ್ರಯ್ಯ ಹಿರೇಮಠ, ರುದ್ರಯ್ಯ ಮಠದ, ನಾಗರಾಜ ಮಠದ ಸೇರಿದಂತೆ ಇತರರಿದ್ದರು.

Share this article