ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಮೇಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷೆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಿವನಂಜಮ್ಮ ಅವರು 7 ಮತಗಳನ್ನು ಪಡೆದು ಗೆಲುವು ಸಾಧಿಸಿದರು.ಅಧ್ಯಕ್ಷ ಸ್ಥಾನಕ್ಕೆ ಸೋಮೇಶ್ ಅವರ ವಿರುದ್ಧದ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಿವನಂಜಮ್ಮ ಅವರು 7 ಮತಗಳನ್ನು ಪಡೆದು ಜಯಗಳಿಸಿದರು.ಆದರೆ ಚುನಾವಣಾ ಪ್ರಕ್ರಿಯೆಗೂ ಮುನ್ನ ಬಿಜೆಪಿ–ಜೆಡಿಎಸ್ ಮೈತ್ರಿ ಸದಸ್ಯರಿಂದ ಅಕ್ರಮದ ಆರೋಪ ಕೇಳಿ ಬಂದಿದ್ದು, ಕೆಲಕಾಲ ಪಟ್ಟಣದಲ್ಲಿ ರಾಜಕೀಯ ವಾತಾವರಣ ಬಿಗುವಿನಿಂದ ಕೂಡಿತ್ತು.ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಮೊತ್ತ ಬಸವರಾಜಪ್ಪ ಮಾತನಾಡಿ, ತಮ್ಮ ಹಾಗೂ ನೂರ್ ಅಹ್ಮದ್ ಅವರ ಸ್ಥಾನವನ್ನು ಅಸಿಂಧುಗೊಳಿಸುವ ಮೂಲಕ ಚುನಾವಣೆಯಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.ಶಾಸಕ ಅನಿಲ್ ಚಿಕ್ಕಮಾದು ಅವರ ಪ್ರಭಾವದಿಂದ ಡಿಆರ್ ಕಚೇರಿಯಿಂದ ಮಾಹಿತಿ ತರಿಸಿ ತಮ್ಮ ಸ್ಥಾನವನ್ನು ಅಸಿಂಧುಗೊಳಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಲಾಗಿದ್ದ ನಾಮಪತ್ರಗಳನ್ನು ಅಸಿಂಧುಗೊಳಿಸಿರುವುದರಿಂದ ಎದುರಾಳಿಗಳು ಚುನಾವಣೆಯನ್ನು ಸಮರ್ಪಕವಾಗಿ ಎದುರಿಸದೇ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿದರು.ಅಧಿಕಾರಿಗಳು ಶಾಸಕರ ಒತ್ತಡಕ್ಕೆ ಒಳಗಾಗಿ ತಮಗೆ ಬೇಕಾದ ರೀತಿಯಲ್ಲಿ ನಿಯಮಗಳನ್ನು ಬಳಸಿಕೊಂಡು ಮೈತ್ರಿ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ದೂರಿದರು. ಸಹಕಾರ ಇಲಾಖೆಯ ಸಹಾಯಕ ನಿಬಂಧಕಿ ಅನುಸೂಯ ಹಾಗೂ ತಹಶೀಲ್ದಾರ್ ಕೂಡ ತಮ್ಮ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಸಾಮೂಹಿಕ ರಾಜೀನಾಮೆ ಚುನಾವಣಾ ಪ್ರಕ್ರಿಯೆಯಿಂದ ಬೇಸತ್ತು ಬಿಜೆಪಿ–ಜೆಡಿಎಸ್ ಮೈತ್ರಿಯ ಎಂಟು ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ ಎಂದು ಬಸವರಾಜಪ್ಪ ತಿಳಿಸಿದರು. ಅರವಿಂದ, ಬಸವರಾಜಪ್ಪ, ನೂರ್ ಅಹ್ಮದ್, ಭುಜಂಗ ನಾಯಕ, ಶಿವಮಲ್ಲಪ್ಪ, ಮಾದಯ್ಯ, ಶುಭಮಂಗಳ ಹಾಗೂ ವೈಲ ಅವರು ಸಾಮೂಹಿಕ ರಾಜೀನಾಮೆ ನೀಡಿದ ಅಭ್ಯರ್ಥಿಗಳು ಎಂದರು. ರಸ್ತೆ ತಡೆ ನಡೆಸಿ ಪ್ರತಿಭಟನೆಈ ಬೆಳವಣಿಗೆಯಿಂದ ಆಕ್ರೋಶಗೊಂಡ ಮೈತ್ರಿ ಅಭ್ಯರ್ಥಿಗಳ ಬೆಂಬಲಿಗರು ಎಚ್.ಡಿ. ಕೋಟೆ ಮೈಸೂರು ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.ಚುನಾವಣೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್ ಬೆಂಬಲಿಗರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷ ಸೊಮೇಶ್ ಹಾಗೂ ಉಪಾಧ್ಯಕ್ಷೆ ಶಿವನಂಜಮ್ಮ ಅವರನ್ನು ಅಭಿನಂದಿಸಿ, ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಒಂದೆಡೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ ಸಂಭ್ರಮಿಸಿದರೆ, ಮತ್ತೊಂದೆಡೆ ಬಿಜೆಪಿ–ಜೆಡಿಎಸ್ ಮೈತ್ರಿ ಸದಸ್ಯರ ಆರೋಪ ಹಾಗೂ ಪ್ರತಿಭಟನೆ ರಾಜಕೀಯ ಚರ್ಚೆಗೆ ಕಾರಣವಾಯಿತು.