ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

KannadaprabhaNewsNetwork |  
Published : Jul 25, 2026, 01:15 AM IST
24ಕೆಆರ್ ಎಂಎನ್ 4.ಜೆಪಿಜಿರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿದ ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು

ರಾಮನಗರ: ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿದ ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಇದು ಕೊತ್ವಾಲ್ ಸರ್ಕಾರ, ಪುಡಿ ರೌಡಿಗಳ ಸರ್ಕಾರ ಎಂದು ಪ್ಲೇಕಾರ್ಡ್ ಪ್ರದರ್ಶಿಸಿದರಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ಸಂದರ್ಭದಲ್ಲಿ ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆಯುವ ಜೊತೆಗೆ ಹಲ್ಲೆ ನಡೆಸುವ ಮೂಲಕ ಕಾಂಗ್ರೆಸ್ ಗೂಂಡಾಗಿರಿ ವರ್ತನೆ ತೋರಿದೆ. ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ, ಗೂಂಡಾಗಿರಿಯನ್ನು ಸಹಿಸಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನೀಟ್ ಪರೀಕ್ಷೆ ವಿಚಾರದಲ್ಲಿ ಯುವಕರನ್ನು ದಾರಿ ತಪ್ಪಿಸಿ ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಕಾಂಗ್ರೆಸ್ ಪಕ್ಷ ಕುತಂತ್ರ ನಡೆಸುತ್ತಿದೆ. ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಬದಲು ಮುಖ್ಮಯಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯ ಪ್ರತಿಭಟನೆಯಲ್ಲಿ ಭಾಗವಹಿಸಿರುವುದನ್ನು ಕಾರ್ಯಕರ್ತರು ತೀವ್ರವಾಗಿ ಖಂಡಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಾತನಾಡಿ, ಬಿಜೆಪಿ ಸಂಸ್ಕೃತಿಯನ್ನು ಹೊಂದಿರುವ ಪಕ್ಷ, ನಾವು ಸಂಸ್ಕೃತಿ, ಆಚಾರ ವಿಚಾರ ಬಿಟ್ಟು ಹೋರಾಟ‌ ಮಾಡಲ್ಲ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ವತಃ ಗೂಂಡಾ ಆಗಿದ್ದಾರೆ. ಇಂತಹ ಮನಸ್ಥಿತಿ ಹೊಂದಿರುವ ನಾಯಕರು ಕಾರ್ಯಕರ್ತರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದರು.

ನೀಟ್ ವಿರುದ್ಧ ಕೇಂದ್ರ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡರು ಸಹ ಕಾಂಗ್ರೆಸ್ ವಿದ್ಯಾರ್ಥಿಗಳ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನ ಅಧಿಕಾರ ಅವಧಿಯಲ್ಲಿ ಕೆಪಿಎಸ್‌ಸಿಯಲ್ಲಿ ಸಾಕಷ್ಟು ಹಗರಣ ನಡೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮವಾಗುತ್ತಿದೆ. ಪಶು ವೈದ್ಯ ನೇಮಕಾತಿಯಲ್ಲಿ 80 ಲಕ್ಷ ಹಣ ಪಡೆಯಲಾಗುತ್ತಿದೆ. ಕಳೆದ ಎರಡು ತಿಂಗಳಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಯಾವ ಸಚಿವರು ರಾಜೀನಾಮೆ ನೀಡಿದರು. ಪಂಜಾಬ್‌ನಲ್ಲಿ ನಡೆದ ಅಕ್ರಮ ನೇಮಕಾತಿಯಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಈ ವೇಳೆ ಯಾರು ರಾಜೀನಾಮೆ ನೀಡಲಿಲ್ಲ ಏಕೆಂದು ಪ್ರಶ್ನಿಸಿದರು.

ಕೆಎಸ್‌ಐಸಿಎಸ್ ಮಾಜಿ ಅಧ್ಯಕ್ಷ ಎಂ.ಗೌತಮ್‌ಗೌಡ ಮಾತನಾಡಿ, ಗೂಂಡಾ ಸರ್ಕಾರದ ಲೀಡರ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಇವರಿಬ್ಬರೂ ಒಂದೇ ಕಡೆ ತರಬೇತಿ ಪಡೆದವರು. ದೆಹಲಿಯಲ್ಲಿ ರಾಹುಲ್‌ಗಾಂಧಿ ದಾರಿ ತಪ್ಪಿದ್ದರೆ, ರಾಜ್ಯದಲ್ಲಿ ಇವರಿಬ್ಬರೂ ದಾರಿ ತಪ್ಪಿದ್ದಾರೆ. ಬಿಜೆಪಿ ಶಾಸಕರ ಮೇಲೆ ನಿನ್ನೆ ಮೊಟ್ಟೆ ಎಸೆದು, ಹಲ್ಲೆ ಮಾಡಲಾಗಿದೆ. ಇದೊಂದು ಗೂಂಡಾ ಸರ್ಕಾರ ಎಂದು ಹರಿಹಾಯ್ದರು.

ಬಿಜೆಪಿ‌ ಮಾಗಡಿ ಮಂಡಲ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ. ಕಾಂಗ್ರೆಸ್‌ನವರು ಮೊಟ್ಟೆ ಹೊಡೆದು, ಗೂಂಡಾಗಿರಿ ಮಾಡುವುದು ನೋಡಿದರೆ ರಾಜ್ಯದಲ್ಲಿ ಬ್ರಿಟೀಷ್‌ ಸರ್ಕಾರ ಉದ್ಭವಿಸಿದೆ. ಕಾಂಗ್ರೆಸ್ ಪಕ್ಷ ದೇಶ ವಿರೋಧಿ ನಡೆ ಅನುಸರಿಸುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಕೆಎಸ್ ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು ಮಾತನಾಡಿದರು. ಬಿಜೆಪಿ ಮಾಧ್ಯಮ ವಕ್ತಾರ ಪದ್ಮನಾಭ, ಮಾಗಡಿ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಉಮೇಶ್, ರಾಜ್ಯಪ್ಯಾನಲಿಸ್ಟ್ ರುದ್ರದೇವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಮುತ್ತು, ಚಂದ್ರಶೇಖರ್, ಪ್ರಕಾಶ್, ಸುರೇಶಣ್ಣ, ಚೇತನ್ , ಶಿವಲಿಂಗಯ್ಯ, ರಾಜೇಗೌಡ, ಶಿವಾನಂದ್, ಕಾಳಯ್ಯ, ಚಂದ್ರು, ಚೆನ್ನಪ್ಪ, ಲಕ್ಷ್ಮಿ, ಸಿದ್ದರಾಜು ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್‌............

ವಿದ್ಯಾರ್ಥಿಗಳ ಹಾದಿ ತಪ್ಪಿಸುತ್ತಿರುವ ತುಕ್ಡೆ ತುಕ್ಡೆ ಗ್ಯಾಂಗ್

ರಾಮನಗರ: ದೇಶದಲ್ಲಿರುವ ವಿರೋಧ ಪಕ್ಷಗಳಾದ ಕಾಂಗ್ರೆಸ್, ಆಮ್‌ಆದ್ಮಿ, ಟಿಎಂಸಿ, ಇವರೆಲ್ಲರೂ ನೀಟ್ ಪ್ರಶ್ನೆಪತ್ರಿಕೆ ಬಯಲು ಹಗರಣವನ್ನು ನೆಪವಾಗಿಟ್ಟುಕೊಂಡು ವಿದ್ಯಾರ್ಥಿಗಳ ಹಾದಿ ತಪ್ಪಿಸುತ್ತಿವೆ ಎಂದು ಕೆಎಸ್‌ಐಸಿಎಸ್ ಮಾಜಿ ಅಧ್ಯಕ್ಷ ಎಂ.ಗೌತಮ್‌ಗೌಡ ಇಂಡಿ ಕೂಟದ ವಿರುದ್ಧ ಹರಿಹಾಯ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೀಟ್ ಬಗ್ಗೆ ಆಗಿರುವ ಅವಾಂತರಗಳ ಬಗ್ಗೆ ಪ್ರಧಾನಮಂತ್ರಿ, ಗೃಹಮಂತ್ರಿಗಳು ಚರ್ಚೆಗೆ ಸಿದ್ಧವಾಗಿರುವುದಾಗಿ ಅನೇಕ ಬಾರಿ ಅವರು ಮನವಿ ಮಾಡಿಕೊಂಡಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಬಯಲಾದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ನೋವಾಗಿರುವುದು ಸತ್ಯ. ಆದರೂ ಮರುಪರೀಕ್ಷೆ ಮಾಡಲಾಗಿದೆ ಎಂದರು.

ಆದರೆ ವಿಪಕ್ಷಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಕೊಟ್ಟು ಇವರು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ. ದೇಶವನ್ನು ಒಡೆಯುವ ದುರುದ್ದೇಶದಿಂದ ತುಕ್ಡೆ ತುಕ್ಡೆ ಗ್ಯಾಂಗ್‌ಗಳು ವಿದ್ಯಾರ್ಥಿಗಳ ಜೊತೆ ಸೇರಿಕೊಂಡಿದ್ದಾರೆ. ಇಂತಹವರು ಬಿರಿಯಾನಿ, ಕಬಾಬ್ ತಿಂದುಕೊಂಡು ದೇಶದ ಬಾವುಟ ಹರಿದುಹಾಕಿ ಭಾರತವನ್ನು ಹೋಳು ಮಾಡುತ್ತೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ವಿದೇಶದಲ್ಲಿ ಸುತ್ತಾಡಿ ದೇಶದ ಬಗ್ಗೆ ಇಲ್ಲಸಲ್ಲದ ವಿಚಾರ ಹೇಳಿಕೊಂಡು ಇದೀಗ ತುಕ್ಡೆ ತುಕ್ಡೆ ಗ್ಯಾಂಗಿನ ನಾಯಕರಾಗಿರುವುದು ವಿಷಾದದ ಸಂಗತಿ ಎಂದರು.

24ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊರಟಗೆರೆ ತಾಲೂಕಿಗೆ ಜಿಪಂ ಸಿಇಒ ದಿಢೀರ್ ಭೇಟಿ
ವೈದ್ಯಕೀಯ ಶಿಕ್ಷಣದಲ್ಲಿ ಸಂವಹನ ಕುರಿತ ಕಾರ್ಯಾಗಾರ