ಕನ್ನಡಪ್ರಭ ವಾರ್ತೆ ಸವದತ್ತಿ ಮಲಪ್ರಭಾ ನದಿಯ ಏತ ನೀರಾವರಿ ಮತ್ತು ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ಹರಿಸುತ್ತಿರುವ ನೀರನ್ನು ಮುಂದಿನ ಹದಿನೈದು ದಿನ ಮುಂದುವರಿಸುವಂತೆ ಆಗ್ರಹಿಸಿ ಶನಿವಾರ ಸವದತ್ತಿ ಹಾಗೂ ವಿವಿಧ ತಾಲೂಕಿನ ರೈತರು ಬಲದಂಡೆ ಕಾಲುವೆಯ ಜಾಕ್ವೆಲ್ ಬಳಿ ಮುಖ್ಯ ರಸ್ತೆಯನ್ನು ಬಂದ್ ಮಾಡಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ಮಲಪ್ರಭಾ ನದಿಯ ಏತ ನೀರಾವರಿ ಮತ್ತು ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ಹರಿಸುತ್ತಿರುವ ನೀರನ್ನು ಮುಂದಿನ ಹದಿನೈದು ದಿನ ಮುಂದುವರಿಸುವಂತೆ ಆಗ್ರಹಿಸಿ ಶನಿವಾರ ಸವದತ್ತಿ ಹಾಗೂ ವಿವಿಧ ತಾಲೂಕಿನ ರೈತರು ಬಲದಂಡೆ ಕಾಲುವೆಯ ಜಾಕ್ವೆಲ್ ಬಳಿ ಮುಖ್ಯ ರಸ್ತೆಯನ್ನು ಬಂದ್ ಮಾಡಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಈ ವೇಳೆ ರಾಜ್ಯ ರೈತ ಸೇನೆ ಅಧ್ಯಕ್ಷ ಶಂಕರ ಅಂಬಲಿ ಮಾತನಾಡಿ, ರೈತರ ಬೆಳೆಗಳಿಗೆ ನೀರು ಪೂರೈಕೆ ಮಾಡಲು ರಾಜಕೀಯ ಷಡ್ಯಂತ್ರ ನಡೆಯುತ್ತಿದ್ದು, ಮಲಪ್ರಭಾ ನದಿ ನೀರನ್ನು ಅನೇಕ ಕಾರ್ಖಾನೆಗಳಿಗೆ ಅವ್ಯಾಹತವಾಗಿ ದುರ್ಬಳಕೆ ಮಾಡಲಾಗುತ್ತಿದೆ. ನದಿ ಪಾತ್ರದ ಅನೇಕ ರೈತರು ಮುಂಗಾರಿ ಹಂಗಾಮಿನಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಹಿಂಗಾರಿ ಬೆಳೆಯಲ್ಲಾದರೂ ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಭಾಗದ ರೈತರು ಬೆಳೆದಂತ ಸೂರ್ಯಪಾನ ಮತ್ತು ಗೋವಿನಜೋಳದ ಬೆಳೆಗಳು ಸದ್ಯಕ್ಕೆ ಉತ್ತಮವಾಗಿದ್ದು, ಇನ್ನೆರಡು ನೀರು ಕೊಟ್ಟರೆ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರುಲಿದೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಕಾಲುವೆಗಳಿಗೆ ಬಿಡುತ್ತಿರುವ ನೀರನ್ನು ಬಂದ್ ಮಾಡುವ ತೀರ್ಮಾಣ ತೆಗೆದುಕೊಂಡಿರುವುದು ಅಪರಾಧ. ತಕ್ಷಣದಿಂದಲೇ ಸರ್ಕಾರ ಈ ನಿರ್ಣಯವನ್ನು ಕೈಬಿಟ್ಟು ಮಾ.೫ರವರೆಗೂ ನೀರನ್ನು ಪೂರೈಸುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರುಪಾಕ್ಷ ಮಾಮನಿ ಮಾತನಾಡಿ, ತಕ್ಷಣ ನೀರನ್ನು ಬಂದ್ ಮಾಡುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಹಿಂಗಾರಿ ಬೆಳೆಗಳು ಸಂಪೂರ್ಣ ನಾಶವಾಗಲಿದ್ದು, ಮಾ.೫ರ ವರೆಗೆ ಕಾಲುವೆ ಮುಖಾಂತರ ನೀರು ಬಿಟ್ಟರೆ ರೈತರ ಬೆಳೆಗಳು ರಕ್ಷಣೆಯಾಗಲಿವೆ. ಈ ಕುರಿತು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಪೋನ್‌ನಲ್ಲಿ ಮಾತನಾಡಿದ್ದು, ಅವರು ನೀರನ್ನು ಪೂರೈಕೆ ಮಾಡುವ ಭರವಸೆ ನೀಡುತ್ತಿದ್ದಾರೆ. ಆದ್ದರಿಂದ, ಅಧಿಕಾರಿಗಳು ಸಮಸ್ಯೆ ಬಗ್ಗೆ ಗಮನ ಹರಿಸಿ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿದರು.ಪ್ರತಿಭಟನೆ ವೇಳೆ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ಅಧಿಕಾರಿಗಳು ರೈತರೊಂದಿಗೆ ಚರ್ಚಿಸಿ ಫೆ.೨೧ಕ್ಕೆ ನಿಗದಿ ಮಾಡಿದ್ದ ದಿನಾಂಕವನ್ನು ಫೆ.೨೮ರವರೆಗೆ ಮುಂದುವರಿಸುವುದಾಗಿ ಭರವಸೆ ನೀಡಿದರು. ಮಾ.೫ರವರೆಗೆ ಕಾಲುವೆಗಳಿಗೆ ನೀರು ಬಿಟ್ಟರೆ ಮಾತ್ರ ಪ್ರತಿಭಟನೆ ಕೈ ಬಿಡುವುದಾಗಿ ಎಚ್ಚರಿಕೆ ನೀಡಿದರು. ಸಭೆ ಕರೆಯುವುದಾದರೆ ಮಲಪ್ರಭಾ ಆಣೆಕಟ್ಟೆಯ ಆವರಣದಲ್ಲಿಯೇ ಕರೆಯಲಿ. ಆ ಸಭೆಗೆ ರೈತರನ್ನು ಆಹ್ವಾನಿಸಿ ನಿರ್ಣಯ ತೆಗೆದುಕೊಂಡರೆ ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.
ಪ್ರತಿಭಟನಾ ಸ್ಥಳದಲ್ಲಿದ್ದ ನೀರಾವರಿ ಇಲಾಖೆ ಅಧಿಕಾರಿಗಳಾದ ಮಹಾವೀರ ಗಣಿ ಮತ್ತು ಸುಭಾಸ ನಾಯಕ, ಡಿಎಸ್ಪಿ ಚಿದಂಬರ ಮಡಿವಾಳರ, ಪಿಐ ಸುರೇಶ ಬೆಂಡೆಗುಂಬಳ ಮೇಲಾಧಿಕಾರಿ ಹಾಗೂ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ಫೆ.೨೮ರವರೆಗೆ ನಿರಂತರ ನೀರನ್ನು ಪೂರೈಕೆ ಮಾಡಲಾಗುತ್ತದೆ ಎಂದು ಸ್ಪಷ್ಟನೆ ಬಂದ ಬಳಿಕ ಫೆ.೨೮ರೊಳಗೆ ಸಲಹಾ ಸಮಿತಿ ಸಭೆ ಸೇರಿಸಿ ಅದರ ನಿರ್ಣಯದಂತೆ ಮುಂದುವರಿಯುವುದಾಗಿ ಭರವಸೆ ನೀಡಿದ ನಂತರ ರಸ್ತೆ ತಡೆಯನ್ನು ರೈತರು ಕೈಬಿಟ್ಟರು. ಪ್ರತಿಭಟನೆಯಿಂದಾಗಿ ಗೋಕಾಕ ಮತ್ತು ರಾಮದುರ್ಗದಿಂದ ಧಾರವಾಡಕ್ಕೆ ಸಂಪರ್ಕ ಸಂಪೂರ್ಣ ಸ್ತಬ್ದವಾಗಿತ್ತು. ಇದರಿಂದ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಪರದಾಡಬೇಕಾಯಿತು.ಈ ವೇಳೆ ಶಂಕರಗೌಡ ಪಾಟೀಲ, ಮಹಾಂತೇಶ ಪಂಚೆನ್ನವರ, ನೀರಾವರಿ ಇಲಾಖೆಯ ಎಮ್.ಬಿಸ್ನಾಳ, ನವಲಗುಂದ ಕಾರ್ಯನಿರ್ವಾಹಕ ಅಭಿಯಂತರ ಜಾಲಗಾರ, ನರಗುಂದದ ಕಾರ್ಯನಿರ್ವಾಹಕ ಅಭಿಯಂತರ ಕುರಿ, ವಿವೇಕ ಮುದಿಗೌಡರ ಹಾಗೂ ರೈತರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.