ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ನರಗುಂದದಲ್ಲಿ ಪ್ರತಿಭಟನೆ ನಡೆಯಿತು.
ನರಗುಂದ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ಬಾಬಾಸಾಹೇಬ ಭಾವೆ ಅರಮನೆ ಆವರಣದಲ್ಲಿರುವ ಬಾಬಾಸಾಹೇಬ ಭಾವೆ ಅವರ ಮೂರ್ತಿಗೆ ಶುಕ್ರವಾರ ಮಾಲಾರ್ಪಣೆ ಮಾಡಿದ ನಂತರ ಪ್ರತಿಭಟನಾಕಾರರು ಕಾಲ್ನಡಿಗೆಯಲ್ಲಿ, ಹಾಡುಗಳನ್ನು ಹಾಡುತ್ತಾ ಹಾಗೂ ಘೋಷಣೆಗಳನ್ನು ಕೂಗುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಿವಾಜಿ ಮಹಾರಾಜ್ ವೃತ್ತದ ವರೆಗೆ ಮೆರವಣಿಗೆ ನಡೆಸಿದರು.
ಶಿವಾಜಿ ವೃತ್ತದಲ್ಲಿ ಪ್ರತಿಭಟನಾಕಾರರು ವೃತ್ತ ರಚಿಸಿ ಮಧ್ಯದಲ್ಲಿ ಕುಳಿತು ಧರಣಿ ನಡೆಸಿದರು.
ತಹಸೀಲ್ದಾರ್ ಸ್ಥಳಕ್ಕೆ ಆಗಮಿಸುವವರೆಗೆ ಹಾಡು ಹಾಗೂ ಘೋಷಣೆಗಳ ಮೂಲಕ ಸರ್ಕಾರದ ಗಮನ ಸೆಳೆಯುತ್ತಾ, ದಲಿತರಿಗೆ ನ್ಯಾಯ ಮತ್ತು ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ಆನಂತರ ವಿವಿಧ ದಲಿತ ಸಂಘಟನೆ ಮುಖಂಡರ ಮಾತನಾಡಿ, ರಾಯಚೂರು, ದಾವಣಗೆರೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ದಲಿತ ಸಮುದಾಯದವರ ಮೇಲಿನ ಗಂಭೀರ ಪ್ರಕರಣಗಳ ಕುರಿತು ಉಲ್ಲೇಖಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ದಲಿತ ಸಮುದಾಯದ ಮೂವರು ವ್ಯಕ್ತಿಗಳ ಕೊಲೆ, ವಿಜಯಪುರ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ದಾವಣಗೆರೆ ಜಿಲ್ಲೆಯ ಪ್ರಕರಣಗಳಲ್ಲಿ ನಡೆದಿರುವ ದೌರ್ಜನ್ಯಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರೇ, ನೀವು ಒಬ್ಬ ದಲಿತರಾಗಿ ದಲಿತರ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ದಲಿತರ ನೋವು ನಿಮಗೆ ಗೊತ್ತಿಲ್ಲವೇ? ಎಂದು ಕಿಡಿಕಾರಿದರು. ದಲಿತರನ್ನು ರಕ್ಷಿಸಲು ನಿಮ್ಮ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ನಮ್ಮ ಕೈಯಲ್ಲಿ ಗನ್ ಕೊಡಿ, ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ನಿಮಗೆ ದಲಿತರ ಮತಗಳು ಮಾತ್ರ ಬೇಕು, ದಲಿತರ ರಕ್ಷಣೆ ಬೇಡವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ, ರಕ್ಷಣೆ ಮತ್ತು ಸೂಕ್ತ ಪರಿಹಾರ ಒದಗಿಸಬೇಕು. ದಲಿತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಿ, ಪ್ರಕರಣಗಳ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಮನವಿ ಸ್ವೀಕರಿಸಿದರು. ದತ್ತು ಜೋಗಣ್ಣವರ, ಮುತ್ತು ಸುರಕೋಡ, ಕೃಷ್ಣಪ್ಪ ಜೋಗಣ್ಣವರ, ಸಂಜು ಜೋಗಣ್ಣವರ, ಮುತ್ತು ಪೂಜಾರ, ವಿಜಯ ದ್ಯಾವಣವರ, ಉಪೇಂದ್ರ ಮಾದರ, ಶಿವು, ಪ್ರಶಾಂತ ತಡಸಿ, ಮಹಾಂತೇಶ ಪೂಜಾರ, ನವೀನ ಜೋಗಣ್ಣವರ, ವಿಜಯ ಬಡೀಗೇರ, ಗೋಪಾಲ ದ್ಯಾವಣನ್ನರ, ಇಬ್ರಾಹಿಂ ನದಾಫ, ನೇತಾಜಿ ನರಗುಂದ, ಸೋಮು ಮಾದರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕಾಲೇಜು ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.