ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ಕಚೇರಿ ಮುತ್ತಿಗೆ ಹಾಕಿ ಸರ್ಕಾರಿ ಜಾಗದಲ್ಲಿ ಶವ ಸಂಸ್ಕಾರ ನಡೆಸಲು ತಡೆಯೊಡ್ಡುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು. ದಲಿತರ ಶವ ಹೂಳಲು ಅವಕಾಶ ಮಾಡಿಕೊಡಬೇಕು ಎಂದು ತಹಸೀಲ್ದಾರ್ ಎಸ್.ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಹೊರವಲಯದ ಲೋಕಪಾವನಿ ನದಿ ತಟದಲ್ಲಿರುವ ಸರ್ಕಾರಿ ಜಾಗದಲ್ಲಿ ಪೂರ್ವಿಕರ ಕಾಲದಿಂದಲೂ ಯಾವುದೇ ಅಡ್ಡಿ ಇಲ್ಲದೆ ಶವ ಸಂಸ್ಕಾರ ನಡೆಸಿಕೊಂಡು ಬಂದಿದ್ದೇವೆ. ಇತ್ತೀಚೆಗೆ ಪಕ್ಕದ ಜಮೀನಿನ ಮಾಲೀಕ ಶವ ಹೂಳಲು ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶವ ಸಂಸ್ಕಾರಕ್ಕೆ ಮೀಸಲಿದ್ದ ಜಮೀನಿನಲ್ಲಿ ತೆಂಗಿನಮರ ಹಾಗೂ ಇತರೆ ತರಕಾರಿ ಸಸಿಗಳನ್ನು ನೆಟ್ಟು ತೊಂದರೆ ಕೊಡುತ್ತಿದ್ದಾರೆ. ಪಕ್ಕದ ಹಳ್ಳದಲ್ಲಿ ಹೂಳುವಂತೆ ಬೆದರಿಸುತ್ತಾರೆ. ಇದರಿಂದ ದಲಿತ ಜನಾಂಗಕ್ಕೆ ಶವ ಸಂಸ್ಕಾರ ನಡೆಸಲು ತೊಂದರೆಯಾಗುತ್ತಿದೆ. ಕೂಡಲೇ ನಿಗದಿಯಾಗಿರುವ ಜಮೀನನಲ್ಲಿ ಸಂಸ್ಕಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಹಾರೋಹಳ್ಳಿ ಸೋಮು, ಚಿಕ್ಕಮೂಗಯ್ಯ, ಮಲ್ಲೇಶ, ಮಹದೇವು, ಕುಮಾರ, ಅಶೋಕ, ಶಂಕರ, ರವಿ, ಧನಂಜಯ, ಶಶಿ, ಚಿಕ್ಕಹನುಮ, ಸಾವಿತ್ರಮ್ಮ, ದೇವಮ್ಮ, ದೇವಿಕ, ರಾಜ, ವಿಜಿ, ಪುಟ್ಟ ಇತರರು ಇದ್ದರು.