- ಸೂಕ್ತ ಪರಿಹಾರ, ಪರ್ಯಾಯ ವ್ಯವಸ್ಥೆಗೆ ಡಿಎಸ್‌ಎಸ್ ಒತ್ತಾಯ
ಕನ್ನಡಪ್ರಭ ವಾರ್ತೆ ದಾವಣಗೆರೆ
ಆವರಗೆರೆ ದನವಿನ ಓಣಿ ಗೋಮಾಳದ ನಿವೇಶನರಹಿತ ಬಡವರ ಗುಡಿಸಲು ತೆರವು ಕಾರ್ಯಾಚರಣೆಯಿಂದ ಬೀದಿಗೆ ಬಿದ್ದ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ, ಪರ್ಯಾಯ ವಸತಿ ಕಲ್ಪಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪಾದಯಾತ್ರೆ ಮೂಲಕ ಪ್ರತಿಭಟಿಸಲಾಯಿತು.ನಗರದ ಶ್ರೀ ಜಯದೇವ ವೃತ್ತದಿಂದ ದಿವಂಗತ ಕಾನ್ಷಿರಾಂ ಅವರ 20ನೇ ಮಹಾ ಪರಿನಿರ್ವಾಣ ದಿನ ಅಂಗವಾಗಿ ಪಾದಯಾತ್ರೆ ಮೂಲಕ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಚ್.ಮಲ್ಲೇಶ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಸಂತ್ರಸ್ತರು ಸಾಗಿ, ಅಲ್ಲಿಂದ ಹಳೇ ಕೋರ್ಟ್ ರಸ್ತೆ, ಹಳೇ ಪಿ.ಬಿ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದರು.
ವಸತಿ ಗುಡಿಸಲುಗಳ ತೆರವು ಕಾರ್ಯಾಚರಣೆಯಲ್ಲಿ ಧ್ವಂಸಗೊಂಡ ಮತ್ತು ವಶಪಡಿಸಿಕೊಂಡ ಸಾಮಗ್ರಿಗಳಿಗೆ ಸೂಕ್ತ ಪರಿಹಾರವಾಗಲಿ ಅಥವಾ ಪರ್ಯಾಯ ವಸತಿ ಸೌಕರ್ಯವನ್ನಾಗಲಿ ಇದುವರೆಗೂ ಒದಗಿಸಿಲ್ಲ. ತೆರವುಗೊಳಿಸಲಾದ ಸಂತ್ರಸ್ತ ಬಡ ಕುಟುಂಬಗಳಿಗೆ ಸೂಕ್ತ ಹಾಗೂ ವಿಶೇಷ ನಷ್ಟ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಬೇಕು. ದಾವಣಗೆರೆ ಪಾಲಿಕೆ, ತಾಲೂಕು ಕಚೇರಿ, ಪೊಲೀಸ್ ಇಲಾಖೆ ಮಾಹಿತಿಯಂತೆ ಗುರುತಿಸಲಾದ 250-300 ಸಂತ್ರಸ್ತ ಕುಟುಂಬಕ್ಕೆ ತಕ್ಷಣ ವಸತಿ ನಿವೇಶನ ಒದಗಿಸಲಿ. ಸರ್ಕಾರದ ಘೋಷಣೆಯಂತೆ ಅವರಗೆರೆ ವಸತಿ ನಿವೇಶನ ಸಂತ್ರಸ್ತರಿಗೆ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಲಿ ಎಂದು ಒತ್ತಾಯಿಸಿದರು.
- - -
ದಾವಣಗೆರೆಯಲ್ಲಿ ಡಿಎಸ್‌ಎಸ್ ನೇತೃತ್ವದಲ್ಲಿ ಶುಕ್ರವಾರ ಆವರಗೆರೆ ದನವಿನ ಓಣಿ ಗುಡಿಸಲು ವಾಸಿಗಳಾಗಿದ್ದ ಸಂತ್ರಸ್ತರು ತಮಗೆ ಪುನರ್ವಸತಿ, ಪರಿಹಾರಕ್ಕೆ ಒತ್ತಾಯಿಸಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು.