ವಕ್ಫ್ ಕಾಯ್ದೆ ರದ್ದಿಗೆ ಆಗ್ರಹಿಸಿ ರೈತರು, ವಿವಿಧ ಸಂಘಟನೆಗಳಿಂದ ಪ್ರತಿಭಟನೆ

KannadaprabhaNewsNetwork |  
Published : Dec 10, 2024, 12:30 AM IST
9ಕೆಎಂಎನ್ ಡಿ31 | Kannada Prabha

ಸಾರಾಂಶ

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ ಮನಸೋ ಇಚ್ಛೆ ರೈತರು, ಸಾರ್ವಜನಿಕ ಜಮೀನುಗಳ ಪಹಣಿಗಳಲ್ಲಿ, ವಕ್ಫ್ ಆಸ್ತಿಯೆಂದು ದಾಖಲಿಸಿದ್ದಾರೆ. ಅದೇ ರೀತಿ ದೇವಸ್ಥಾನ, ಸಂಘ ಸಂಸ್ಥೆ, ಸರ್ಕಾರಿ ಶಾಲೆ, ಕೆರೆಕುಂಟೆ, ಹಿಂದೂ ಸ್ಮಶಾನ ಭೂಮಿ, ಪುರಾತನ ಸ್ಮಾರಕ, ಮಠ ಮಂದಿರಗಳ ಜಮೀನು ಸೇರಿದಂತೆ ಸಾರ್ವಜನಿಕ ಆಸ್ತಿಗಳನ್ನು ಯಾವುದೇ ದಾಖಲೆಗಳು ಇಲ್ಲದಿದ್ದರೂ ಸಹ ಇಂತಹ ಆಸ್ತಿಗಳು ವಕ್ಫ್ ಆಸ್ತಿಗಳೆಂದು ನಮೂದಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರಿಗೆ ಮಾರಕವಾದ ವಕ್ಫ್ ಕಾಯ್ದೆ ರದ್ದಿಗೆ ಆಗ್ರಹಿಸಿ ರೈತರು ವಿವಿಧ ಸಂಘಟನೆಗಳೊಂದಿಗೆ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಸಿಲ್ವರ್ ಜೂಬಿಲಿ ಪಾರ್ಕಿನಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ ಮನಸೋ ಇಚ್ಛೆ ರೈತರು, ಸಾರ್ವಜನಿಕ ಜಮೀನುಗಳ ಪಹಣಿಗಳಲ್ಲಿ, ವಕ್ಫ್ ಆಸ್ತಿಯೆಂದು ದಾಖಲಿಸಿದ್ದಾರೆ. ಅದೇ ರೀತಿ ದೇವಸ್ಥಾನ, ಸಂಘ ಸಂಸ್ಥೆ, ಸರ್ಕಾರಿ ಶಾಲೆ, ಕೆರೆಕುಂಟೆ, ಹಿಂದೂ ಸ್ಮಶಾನ ಭೂಮಿ, ಪುರಾತನ ಸ್ಮಾರಕ, ಮಠ ಮಂದಿರಗಳ ಜಮೀನು ಸೇರಿದಂತೆ ಸಾರ್ವಜನಿಕ ಆಸ್ತಿಗಳನ್ನು ಯಾವುದೇ ದಾಖಲೆಗಳು ಇಲ್ಲದಿದ್ದರೂ ಸಹ ಇಂತಹ ಆಸ್ತಿಗಳು ವಕ್ಫ್ ಆಸ್ತಿಗಳೆಂದು ನಮೂದಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಇಂತಹ ನಡೆಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರ ನೋಟಿಸ್ ವಾಪಸ್ ಪಡೆಯಲಾಗುವುದು ಎಂದು ಹೇಳಿದ್ದರೂ ಸಹ ನೋಂದಣಿ ಇಲಾಖೆಯಲ್ಲಿ ಪರಭಾರೆ ನಿಷೇಧ ಎಂದು ದಾಖಲು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಮುಂದಿನ ದಿನಗಳಲ್ಲಿ ಆಸ್ತಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಮಾರಾಟ, ಅಡಮಾನ ಮಾಡಲು ತೊಂದರೆಯಾಗಲಿದೆ. ಯಾವುದೇ ಆಸ್ತಿಗೆ ಮಾಲೀಕತ್ವ ಸಾಬೀತು ಪಡಿಸಲು ಸೂಕ್ತದಾಖಲೆಗಳನ್ನು ಒದಗಿಸಬೇಕು ಹಾಗೂ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ಇಬ್ಬರ ದಾಖಲೆಗಳನ್ನು ಪರಿಶಿಲಿಸಿ ಮಾಲೀಕತ್ವ ದೃಢೀಕರಿಸಬೇಕು. ಆದರೆ, ಈಗಾಗಲೇ ಮಾಲೀಕತ್ವ ಹೊಂದಿರುವ ವ್ಯಕ್ತಿಗೆ ಯಾವುದೇ ನೋಟಿಸ್ ನೀಡದೆ ಆಸ್ತಿಗಳನ್ನೆಲ್ಲಾ ವಕ್ಫ್ ಬೋರ್ಡ್ ಆಸ್ತಿಗಳೆಂದು ರೆವಿನ್ಯೂ ದಾಖಲೆಗಳಲ್ಲಿ ನಮೂದಿಸುತ್ತಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ರೈತರು ಮತ್ತು ಸಾರ್ವಜನಿಕ ಆಸ್ತಿ ಕಬಳಿಸುತ್ತಿರುವ ವಕ್ಫ್ ಕಾಯ್ದೆ ರದ್ದುಗೊಳಿಸಬೇಕು. ಸಂವಿಧಾನಕ್ಕೆ ಅನುಗುಣವಾಗಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು. ರೈತರ ಜಮೀನಿನ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ಎಂಬುದನ್ನು ಕೂಡಲೇ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ದೇವಸ್ಥಾನದ ಜಾಗಗಳನ್ನು ವಕ್ಫ್ ಬೋರ್ಡ್‌ನಿಂದ ಮುಕ್ತ ಗೊಳಿಸಬೇಕು. ಗೋಮಾಳ, ಸಾರ್ವಜನಿಕ ಆಸ್ತಿ , ಮುಜರಾಯಿ ಇಲಾಖೆಗಳ ಆಸ್ತಿ, ಪಾರಂಪರಿಕ ತಾಣ, ಸರ್ಕಾರಿ ಕಚೇರಿ, ಶಾಲೆಗಳ ಜಾಗಗಳನ್ನು ಶಾಶ್ವತವಾಗಿ ವಕ್ಫ್ ಬೋರ್ಡ್ ನಿಂದ ಮುಕ್ತ ಮಾಡಿ ವಕ್ಫ್ ಬೊರ್ಡ್ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅರ್ಚಕ ಭಾನುಪ್ರಕಾಶ್ ಶರ್ಮ, ಭಾರತೀಯ ಕಿಸಾನ್ ಸಂಘದ ಹಾಡ್ಯ ರಮೇಶ್‌ ರಾಜು, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಡಿ.ಎಂ.ಹುಚ್ಚಯ್ಯ, ಕದಂಬ ಸೇನೆ ರಾಜ್ಯಾಧ್ಯಕ್ಷ ಬೇಕರಿ ರಮೇಶ್, ಸ್ವಾಭಿಮಾನ ದಲಿತ ಸಂಘರ್ಷ ಸಮಿತಿ ಉಮೇಶ್, ಬಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್, ಜೈ ಕರ್ನಾಟಕ ಸಂಘದ ಅಧ್ಯಕ್ಷ ನಾರಾಯಣ್, ರಾಜ್ಯ ರೈತ ಸಂಘದ ಸೊ.ಸಿ.ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆ ಅಶೋಕ್, ಜಿಲ್ಲಾ ಬ್ರಾಹ್ಮಣ ಸಭಾದ ಎಚ್.ಎನ್.ನರಸಿಂಹಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ