ಕೊಪ್ಪಳ: ಬಲ್ದೋಟ ಕಂಪನಿ ಆರಂಭಿಸಿ ಎಂದು ಕಂಪನಿಗೆ ಭೂಮಿ ನೀಡಿರುವ ರೈತರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಭೂಮಿ ನೀಡಿದ ಸಂದರ್ಭದಲ್ಲಿ ಕೈಗಾರಿಕೆ ಸ್ಥಾಪನೆಯಾಗಿ ಸ್ಥಳೀಯ ಪ್ರದೇಶದ ಅಭಿವೃದ್ಧಿಗೆ ವೇಗ ದೊರೆಯಲಿದೆ. ರೈತ ಕುಟುಂಬಗಳ ಯುವಕರಿಗೆ ಉದ್ಯೋಗ ಸಿಗಲಿದೆ ಎಂಬ ಭರವಸೆ ಇತ್ತು. ಆದರೆ ಎರಡು ದಶಕಗಳು ಕಳೆದರೂ ನಿರೀಕ್ಷಿತ ಕೈಗಾರಿಕೆ ಸ್ಥಾಪನೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರ್ಯಾಯ ಜೀವನೋಪಾಯ ಕಲ್ಪಿಸುವಲ್ಲಿ ಸರ್ಕಾರ ಹಾಗೂ ಸಂಬಂಧಿಸಿದ ಸಂಸ್ಥೆಗಳು ವಿಫಲವಾಗಿವೆ. ಭೂಮಿ ಕಳೆದುಕೊಂಡ ಕುಟುಂಬಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಹಲವು ಕುಟುಂಬಗಳ ಯುವಕರು ಉದ್ಯೋಗಕ್ಕಾಗಿ ಅಲೆದಾಡುವಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಲ್ದೋಟ ಕಂಪನಿ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಕಂಪನಿ ಸ್ಥಾಪಿಸಲು ಸಾಧ್ಯವಿದ್ದರೆ ತ್ವರಿತವಾಗಿ ಕಾಮಗಾರಿ ಆರಂಭಿಸಿ, ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡಬೇಕು. ಕಂಪನಿ ಸ್ಥಾಪನೆ ಸಾಧ್ಯವಿಲ್ಲದಿದ್ದರೆ, ಭೂಮಿ ನೀಡಿದ ರೈತ ಕುಟುಂಬಗಳ ಅರ್ಹ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಇಪ್ಪತ್ತು ವರ್ಷಗಳ ಹಿಂದಿನ ಭರವಸೆಗಳನ್ನು ಇನ್ನೂ ಮುಂದುವರಿಸಿಕೊಂಡು ಹೋಗುವುದರಿಂದ ರೈತರ ಸಮಸ್ಯೆ ಪರಿಹಾರವಾಗುವುದಿಲ್ಲ. ಸರ್ಕಾರ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ನಡೆಸಿ, ಭೂಮಿ ನೀಡಿದ ರೈತರ ಸಮಸ್ಯೆಗಳನ್ನು ಆಲಿಸಿ, ಶಾಶ್ವತ ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.