ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಳೆದ ಗುರುವಾರ ಫೆ.19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆದ ಮೆರವಣಿಗೆ ವೇಳೆ ಪಂಖಾ ಮಸೀದಿ ಬಳಿ ಕಲ್ಲು ತೂರಾಟ ಪ್ರಕರಣ ನಡೆದಿತ್ತು. ನಂತರ ತರಕಾರಿ ಗಾಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಎಲ್ಲ ಘಟನೆಗಳಿಂದ ಅಶಾಂತ ವಾತಾವರಣ ಉಂಟಾಗಿದ್ದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನಂತರ ನವನಗರ ಹಾಗೂ ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ತೆರವುಗೊಳಿಸಿ ಬಾಗಲಕೋಟೆ ಹಳೇ ನಗರಕ್ಕೆ ಮಾತ್ರ ನಿಷೇಧಾಜ್ಞೆ ಮುಂದುವರಿಸಿದ್ದಾರೆ.ಕಲ್ಲು ತೂರಾಟ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಯು ಫೆ.26ರಂದು ಬಾಗಲಕೋಟೆ ಚಲೋಗೆ ಕರೆ ಕೊಟ್ಟಿದ್ದು ಆ ಹಿನ್ನೆಲೆಯಲ್ಲಿ ನಗರದಲ್ಲಿ ಎಲ್ಲೆಡೆ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಗರದ ಎಲ್ಲ ಓಣಿಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.ಈಗಾಗಲೇ ಹಿಂದೂ ಮುಖಂಡರಿಗೆ ಪೊಲೀಸ್ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ನಗರದಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಗಿದ್ದು, ಮಂಗಳೂರಿನಿಂದ ಸ್ಟೇಷಲ್ ರ್‍ಯಾಪಿಡ್ ಆಕ್ಷನ್ ಫೋರ್ಸ್ ಕೂಡ ನಿಯೋಜಿಸಲಾಗಿದೆ.ಮದ್ಯ ಮಾರಾಟ, ಸಾಗಾಣಿಕೆ ನಿಷೇಧ
ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲೆಸೆತ ಪ್ರಕರಣವನ್ನು ಖಂಡಿಸಿ ಗುರುವಾರ ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧ ಮಾಡಲಾಗಿದೆ.ಬಾಗಲಕೋಟೆ ಪೊಲೀಸ್ ಅಧೀಕ್ಷಕರ ಕೋರಿಕೆ ಮೇರೆಗೆ ಬಾಗಲಕೋಟೆ ಡಿಸಿ ಸಂಗಪ್ಪ ಅವರಿಂದ ಆದೇಶ ಮಾಡಲಾಗಿದ್ದು, ಫೆ.25 ರ ಮಧ್ಯರಾತ್ರಿಯಿಂದ ಫೆ.26 ಮಧ್ಯ ರಾತ್ರಿವರೆಗೆ ಮದ್ಯ ಮಾರಾಟ ಹಾಗೂ ಸಾಗಾಣಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.