ಬೆಂಗಳೂರಿಗೆ 3 ಜಿಲ್ಲೆಯಿಂದಲೇ ಅಧಿಕ ತರಕಾರಿ ಪೂರೈಕೆ: ಗುಣಮಟ್ಟ ಪರಿಶೀಲನೆಗೆ ನಾಗರೀಕರ ಆಗ್ರಹ

KannadaprabhaNewsNetwork |  
Published : Feb 26, 2026, 04:00 AM IST
kubera pet sp road 11 | Kannada Prabha

ಸಾರಾಂಶ

ತರಕಾರಿಗಳಲ್ಲಿ ಸೀಸದ ಅಂಶ ಪತ್ತೆಯಾಗಿರುವ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೇ ನಗರಕ್ಕೆ ಶೇ.90 ರಷ್ಟು ತರಕಾರಿ ಸರಬರಾಜಾಗುತ್ತಿದೆ. ಇನ್ನುಳಿದ ಜಿಲ್ಲೆಗಳ ಸರಬರಾಜಿನ ಪ್ರಮಾಣ ಅಲ್ಪ. ಅಂದರೆ, ಶೇ. 10ರಷ್ಟು ಮತ್ತು ಆ ತರಕಾರಿಗಳಲ್ಲಿ ಹಾನಿಕಾರಕ ಅಂಶಗಳಿವೆಯೇ ಎಂಬುದು ಇನ್ನೂ ಪತ್ತೆ ಮಾಡಲಾಗಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತರಕಾರಿಗಳಲ್ಲಿ ಸೀಸದ ಅಂಶ ಪತ್ತೆಯಾಗಿರುವ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೇ ನಗರಕ್ಕೆ ಶೇ.90 ರಷ್ಟು ತರಕಾರಿ ಸರಬರಾಜಾಗುತ್ತಿದೆ. ಇನ್ನುಳಿದ ಜಿಲ್ಲೆಗಳ ಸರಬರಾಜಿನ ಪ್ರಮಾಣ ಅಲ್ಪ. ಅಂದರೆ, ಶೇ. 10ರಷ್ಟು ಮತ್ತು ಆ ತರಕಾರಿಗಳಲ್ಲಿ ಹಾನಿಕಾರಕ ಅಂಶಗಳಿವೆಯೇ ಎಂಬುದು ಇನ್ನೂ ಪತ್ತೆ ಮಾಡಲಾಗಿಲ್ಲ.

ನೆಲಮಂಗಲ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ನಗರಕ್ಕೆ ಸರಬರಾಜಾಗುವ ತರಕಾರಿಗಳಲ್ಲಿ ಅಪಾಯಕಾರಿ ಲೋಹವಾದ ಸೀಸ ಮತ್ತು ಕ್ರಿಮಿನಾಶಕ ಅಂಶಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ತೆ ಹಚ್ಚಿತ್ತು. ಈ ಹಿನ್ನೆಲೆಯಲ್ಲಿ ನಗರಕ್ಕೆ ಯಾವ್ಯಾವ ಜಿಲ್ಲೆಗಳಿಂದ ತರಕಾರಿ ಪೂರೈಕೆಯಾಗುತ್ತದೆ ಎಂದು ಪರಿಶೀಲಿಸಿದಾಗ ಈ ಮೂರು ಜಿಲ್ಲೆಗಳ ಪಾರಮ್ಯ ಕಂಡುಬಂದಿದೆ.

ನಗರಕ್ಕೆಶೇ.10 ರಷ್ಟು ತರಕಾರಿಯು ಪ್ರಮುಖವಾಗಿ ಹಾಸನ (ಹೂಕೋಸು), ರಾಮನಗರ (ಕ್ಯಾಪ್ಸಿಕಂ, ಬೆಂಡೆಕಾಯಿ), ಮೈಸೂರು (ಸೌತೆಕಾಯಿ), ತುಮಕೂರು (ಹೀರೇಕಾಯಿ), ಮಂಡ್ಯ (ಬೆಂಡೆಕಾಯಿ) ಮತ್ತಿತರ ಜಿಲ್ಲೆಗಳಿಂದ ಸರಬರಾಜಾಗುತ್ತದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದ ತರಕಾರಿಗಳನ್ನೂ ಪರೀಕ್ಷಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಕೆಆರ್‌ ಮಾರುಕಟ್ಟೆಯಲ್ಲೇ 353 ಟನ್‌ ಮಾರಾಟ

ಕೆ.ಆರ್‌. ಮಾರುಕಟ್ಟೆಯ ಬುಧವಾರದ ತರಕಾರಿ ವಹಿವಾಟನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, ಬರೋಬ್ಬರಿ 387 ಕ್ವಿಂಟಲ್‌ ಹಸಿಮೆಣಸಿನಕಾಯಿ ಮಾರುಕಟ್ಟೆಗೆ ಬಂದಿದೆ. 325 ಕ್ವಿಂಟಲ್‌ ಕ್ಯಾರೇಟ್‌, 267 ಕ್ವಿಂಟಲ್‌ ಹಸಿ ಬಟಾಣಿ, 250 ಕ್ವಿಂಟಲ್‌ ನಿಂಬೆಹಣ್ಣು 189 ಕ್ವಿಂಟಲ್‌ ಬೆಂಡೆಕಾಯಿ ಸೇರಿದಂತೆ ಒಟ್ಟಾರೆ 353 ಟನ್‌ಗೂ ಅಧಿಕ ತರಕಾರಿ ಸರಬರಾಜಾಗಿದೆ.

ದಾಸನಪುರ ತರಕಾರಿ ಮಾರುಕಟ್ಟೆಗೆ 260 ಕ್ವಿಂಟಲ್‌ ಟೊಮ್ಯಾಟೋ, 93 ಕ್ವಿಂಟಲ್‌ ಹುರುಳಿ ಕಾಯಿ, 90 ಕ್ವಿಂಟಲ್‌ ಬೆಂಡೆಕಾಯಿ, 85 ಕ್ವಿಂಟಲ್‌ ಎಲೆಕೋಸು, 78 ಕ್ವಿಂಟಲ್‌ ಹಸಿ ಮೆಣಸಿನಕಾಯಿ ಸೇರಿದಂತೆ ಒಟ್ಟಾರೆ 137 ಟನ್‌ ತರಕಾರಿ ಬುಧವಾರ ಸರಬರಾಜಾಗಿದೆ. ಇದಲ್ಲದೆ ಯಶವಂತಪುರ ಎಪಿಎಂಸಿಗೆ ಈರುಳ್ಳಿ ಮತ್ತು ಆಲೂಗಡ್ಡೆಯೂ ಭಾರೀ ಪ್ರಮಾಣದಲ್ಲಿ ಸರಬರಾಜಾಗಿದೆ.

ಹಾಪ್‌ಕಾಮ್ಸ್‌ನಲ್ಲಿ 28 ಟನ್‌ ಬಿಕರಿ

ನಗರದಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ರಜಾದಿನ ಹೊರತುಪಡಿಸಿ ದಿನವೂ 28 ಟನ್‌ಗೂ ಅಧಿಕ ತರಕಾರಿ ಮಾರಾಟವಾಗಲಿದೆ. ಬೆಂಗಳೂರು ಗ್ರಾಮಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳ ಬೆಳೆಗಾರರು ನೇರವಾಗಿ ಹಾಪ್‌ಕಾಮ್ಸ್‌ಗೆ ತರಕಾರಿ ಮಾರಾಟ ಮಾಡುತ್ತಾರೆ.

ಇದಲ್ಲದೆ, ಬೆಂಗಳೂರಿನಲ್ಲಿ ಬಹಳಷ್ಟು ಶಾಪಿಂಗ್‌ ಮಾಲ್‌ಗಳಿದ್ದು ಇವುಗಳಲ್ಲೂ ಭಾರೀ ಪ್ರಮಾಣದ ತರಕಾರಿ ದಿನವೂ ಮಾರಾಟವಾಗಲಿದೆ. ಕೆಲವು ರೈತರು ವಾಹನಗಳಲ್ಲಿ ತರಕಾರಿ ತುಂಬಿಕೊಂಡು ಬಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಇನ್ನು ಕೆಲ ವ್ಯಾಪಾರಸ್ಥರು ನೇರವಾಗಿ ರೈತರ ಹೊಲಗಳಿಗೆ ತೆರಳಿ ತರಕಾರಿ ಖರೀದಿಸಿಕೊಂಡು ಬರುತ್ತಾರೆ. ಇದ್ಯಾವುದೂ ಲೆಕ್ಕಕ್ಕೇ ಸಿಗುವುದಿಲ್ಲ. ಒಟ್ಟಾರೆ ಹೇಳುವುದಾದರೆ ನಗರದಲ್ಲಿ ದಿನವೂ 700 ಟನ್‌ಗೂ ಅಧಿಕ ತರಕಾರಿ ಮಾರಾಟವಾಗುವುದು ಸ್ಪಷ್ಟವಾಗುತ್ತದೆ.

ದಿನವೂ ಬರೋಬ್ಬರಿ 700 ಟನ್‌ ಪೂರೈಕೆಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ಪ್ರತಿದಿನವೂ ನಗರಕ್ಕೆ 700 ಟನ್‌ಗೂ ಅಧಿಕ ತರಕಾರಿ ಸರಬರಾಜಾಗುತ್ತಿದೆ. ಹಬ್ಬ, ವಿಶೇಷ ಸಂದರ್ಭಗಳಲ್ಲಂತೂ ಈ ಪ್ರಮಾಣ ಇನ್ನಷ್ಟು ಹೆಚ್ಚು. ಪ್ರಮುಖವಾಗಿ ಕೆ.ಆರ್‌. ಮಾರುಕಟ್ಟೆ, ದಾಸನಪುರದ ಮಾರುಕಟ್ಟೆಗಳಿಗೆ ಭಾರೀ ಪ್ರಮಾಣದಲ್ಲಿ ತರಕಾರಿ ಸರಬರಾಜಾಗುತ್ತದೆ. ಇದಲ್ಲದೆ ಹಾಪ್‌ಕಾಮ್ಸ್‌ಗೂ ರೈತರು ನೇರವಾಗಿ ಮಾರಾಟ ಮಾಡಲಿದ್ದಾರೆ. ಇನ್ನುಳಿದಂತೆ ಶಾಪಿಂಗ್ ಮಾಲ್‌ಗಳಲ್ಲೂ ಗಣನೀಯವಾಗಿ ತರಕಾರಿ ಮಾರಾಟವಾಗುತ್ತದೆ. ಬೆಳೆಗಾರರಿಂದ ನೇರ ಮಾರಾಟವೂ ನಡೆಯುತ್ತಿದೆ.

ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ದಿನವೂ ಹಾಪ್‌ಕಾಮ್ಸ್‌ಗೆ ಸರಾಸರಿ 28 ಟನ್‌ಗೂ ಅಧಿಕ ತರಕಾರಿ ಸರಬರಾಜಾಗುತ್ತದೆ.

-ಟಿ.ಸೋಮು, ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈರುಳ್ಳಿ ಬೆಳೆಗೆ ವೈಜ್ಞಾನಿಕ ಸ್ಪರ್ಶ ಅವಶ್ಯ
ಗ್ರಾಮೀಣ ಪ್ರದೇಶದ ಅಭಿವೃದ್ಧಿ ಅವಶ್ಯ: ಕ್ಯಾ.ಬ್ರಿಜೇಶ್ ಚೌಟ