ದಾವಣಗೆರೆ: ಅಕ್ಷರ ದಾಸೋಹ ಬಿಸಿಯೂಟ ತಯಾರಕರಿಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ವೇತನ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿಯಿಂದ ನಗರದಲ್ಲಿ ಶನಿವಾರ ಪ್ರತಿಭನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು, 23 ವರ್ಷದಿಂದ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಶಾಲೆಗಳು ಸೇರಿದಂತೆ ಕಿರಿಯ-ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯಡಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರ ಮಹಿಳೆಯರು ಅತ್ಯಂತ ಕಡಿಮೆ ಗೌರವಧನಕ್ಕೆ ಕೆಲಸ ಮಾಡಿಕೊಂಡು ಬಂದಿದ್ದು, ಮುಖ್ಯ ಅಡುಗೆಯವರಿಗೆ 3700 ರು., ಅಡುಗೆ ಸಹಾಯಕರಿಗೆ 3600 ರು. ನೀಡಲಾಗುತ್ತಿದೆ ಎಂದರು.
ಅಲ್ಪ ಗೌರವಧನಕ್ಕೆ ದುಡಿಯುವ ಮಹಿಳೆಯರ ಜೀವನ ಕಷ್ಟಕರವಾಗಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರ ವೇತನವನ್ನು ಹೆಚ್ಚಿಸಬೇಕು. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ವೇತನವನ್ನು 6 ಸಾವಿರ ರು.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.60 ವರ್ಷ ಮೇಲ್ಪಟ್ಟ ಅಡುಗೆ ತಯಾರಕರಿಗೆ 30-40 ಸಾವಿರ ರು. ಬದಲಿಗೆ ಕನಿಷ್ಠ 2 ಲಕ್ಷ ರು. ಗೆ ಇಡುಗಂಟು ಹೆಚ್ಚಿಸಬೇಕು. ಕನಿಷ್ಠ 5 ವರ್ಷ ಕೆಲಸ ಮಾಡಿ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ ಅಥವಾ ಅನಾರೋಗ್ಯದಿಂದ ಬಿಡುಗಡೆಗೊಳ್ಳುವ ಬಿಸಿಯೂಟ ತಯಾರಕರಿಗೂ ಇಡುಗಂಟು ಇಡಬೇಕು. ಯೋಜನೆ ಆರಂಭವಾದಾಗಿನಿಂದ 15ಕ್ಕೂ ಹೆಚ್ಚು ಬಿಸಿಯೂಟ ತಯಾರಕರು ಶಾಲೆಯಲ್ಲಿ ಅಡುಗೆ ತಯಾರಿಸುವಾಗ ಕುಕ್ಕರ್ ಸ್ಫೋಟ ಸೇರಿದಂತೆ ವಿವಿಧ ರೀತಿ ಅವಘಡಗಳಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಈವರೆಗೆ ಪರಿಹಾರ ಸಿಕ್ಕಿಲ್ಲ. ತಕ್ಷಣ ಮೃತರ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರು. ಪರಿಹಾರ ನೀಡಬೇಕು, ಸಿಬ್ಬಂದಿಗೆ ಪ್ರತಿ ತಿಂಗಳು 5 ರಂದು ಒಳಗಾಗಿ ವೇತನ ಪಾವತಿಸಬೇಕು ಸೇರಿದಂತೆ ಇತ್ಯಾದಿ ಬೇಡಿಕೆ ಈಡೇರಿಸಬೇಕೆಂದು ಆಗ್ರಹಸಿದರು.