ಮಾನ್ವಿ: ಕೇಂದ್ರ ಬಿಜೆಪಿ ಸರ್ಕಾರದ ಜನ, ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ಮತ್ತು ಸ್ವಾತಂತ್ರ, ಪ್ರಜಾಪ್ರಭುತ್ವ ಸಾಮಾಜಿಕ ನ್ಯಾಯ, ಒಕ್ಕೂಟ ರಚನೆ ಮುಂತಾದವುಗಳ ಮೇಲಿನ ಆಕ್ರಮಣ ವಿರೋಧಿಸುತ್ತದೆ ಹಾಗೂ ಧರ್ಮ ನಿರಪೇಕ್ಷ ಪ್ರಜಾಪ್ರಭತ್ವ, ಗಣತಂತ್ರದ ಸಂವಿಧಾನ ರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತಾಲೂಕು ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರಬೇಕು.
ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಮತ್ತು ಎನ್ಎಂಪಿಯನ್ನೊಳಗೊಂಡಂತೆ ಎಲ್ಲಾ ಸ್ವರೂಪದ ಖಾಸಗಿಕರಣವನ್ನು ಕೈಬಿಡಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು. ಡಾ.ಸ್ವಾಮಿನಾಥನ್ ಶಿಫಾರಸ್‌ನಂತೆ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ರಚಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡ ಎಚ್.ಶರ್ಫುದ್ದಿನ ಪೋತ್ನಾಳ್, ಎಂ.ಬಿ.ಸಿದ್ರಾಮಯ್ಯ ಸ್ವಾಮಿ, ರುದ್ರಪ್ಪನಾಯಕ, ಅಬ್ರಾಹಂ ಅಮರವತಿ, ಆಂಜಿನೆಯ್ಯ ಕೋಟೆ, ಅಂಬಣ್ಣ ನಾಯಕ ಬ್ಯಾಗವಾಟ, ಸಿದ್ದಲಿಂಗಯ್ಯ, ತೆರೇಸಾ ಪಟ್ಟದಕಲ್ಲು, ಲಲಿತಾ, ಚನ್ನಮ್ಮ, ಗಂಗೂ, ರೇಖಾ, ಕಾಳಮ್ಮ, ಲಕ್ಷ್ಮಿಬಾಯಿ ಪೆರೀಕಲ್, ಸೇರಿ ಅನೇಕರು ಇದ್ದರು.