ಲಾರಿ, ಟಿಪ್ಪರ್, ಗೂಡ್ಸ್ ಟೆಂಪೋ ಮಾಲೀಕರಿಂದ ಪ್ರತಿಭಟನೆ: ವಾಹನ ಸಂಚಾರ ಸ್ಥಗಿತ

KannadaprabhaNewsNetwork | Published : Jan 20, 2024 2:01 AM

ಸಾರಾಂಶ

ಕೇಂದ್ರ ಸರ್ಕಾರದ ಹೊಸ ಕಾಯಿದೆ ಪ್ರಕಾರ ರಸ್ತೆಯಲ್ಲಿ ಚಲಿಸುವಾಗ ಲಾರಿಗಳಿಗೆ ಯಾರಾದರು ಬಂದು ಆಕಸ್ಮಿಕವಾಗಿ ಡಿಕ್ಕಿ ಹೊಡೆದರೆ, ಚಾಲಕರ ವಾಹನದಲ್ಲಿ ತೊಂದರೆಯಾದಲ್ಲಿ ಡಿಕ್ಕಿ ಹೊಡೆದು ತೊಂದರೆ ಅಥವಾ ಪ್ರಯಾಣಿಕರು ಮೃತಪಟ್ಟರೆ ಲಾರಿ ಚಾಲಕರನ್ನು ಹೊಣೆ ಮಾಡುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಕೇಂದ್ರ ಸರ್ಕಾರ ಇಂತಹ ಕಾನೂನನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಚಳವಳಿ ತೀವ್ರಗೊಳಿಸುವುದಾಗಿ ಎಚ್ಚರಿಕೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹಿಟ್ ಅಂಡ್ ರನ್ ಪ್ರಕರಣ ಕಾಯಿದೆ ವಿರೋಧಿಸಿ ರಾಜ್ಯ ಲಾರಿ ಮಾಲೀಕರ ಸಂಘಟನೆ ಕರೆ ನೀಡಿದ್ದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಿಸಿ ತಾಲೂಕಿನ ಲಾರಿ ಮತ್ತು ಟಿಪ್ಪರ್, ಗೂಡ್ಸ್ ಟೆಂಪೋ ಮಾಲೀಕರು ಗುರುವಾರದಿಂದ ವಾಹನ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ್ದಾರೆ.ಮುಷ್ಕರದ ಹಿನ್ನೆಲೆಯಲ್ಲಿ ಲಾರಿ ಮಾಲೀಕರುಗಳು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಕೊಲ್ಲಿ ವೃತ್ತದ ಹೆದ್ದಾರಿಯಲ್ಲಿ ಪ್ರತಿಭಟನೆಗಿಳಿದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.ಹೆದ್ದಾರಿಯ ಎರಡೂ ಸ್ಥಳಗಳಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ತೆರವುಗೊಳಿಸುವಲ್ಲಿ ಕ್ರಮ ಕೈಗೊಂಡರು.ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಚಾಲಕರಿಗೆ ಸೆಕ್ಸನ್ 106/1 ಹಾಗೂ 106/2 ರನ್ವಯ 10 ವರ್ಷ ಜೈಲು ಶಿಕ್ಷೆ, 7 ಲಕ್ಷ ದಂಡದ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ತೀವ್ರವಾಗಿ ವಿರೋಧಿಸಿದರು.ಹಿಟ್ ಅಂಡ್ ರನ್ ಪ್ರಕರಣದಲ್ಲಿ ದಂಡ ಕಟ್ಟಲು ವಾಹನ ಮಾಲೀಕರು ಹಾಗೂ ಚಾಲಕರುಗಳು ಆರ್ಥಿಕವಾಗಿ ಸದೃಢರಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಇಂತಹ ಕಾನೂನನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಚಳವಳಿ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.ಲಾರಿ ಮಾಲೀಕರ ಸಂಘದ ಪಿ. ಸಂದರ್ಶ, ಪಿ.ಆರ್. ಸುನಿಲ್‌ಕುಮಾರ್ ಅವರುಗಳು ಮಾತನಾಡಿ, ಕೇಂದ್ರ ಸರ್ಕಾರದ ಹೊಸ ಕಾಯಿದೆ ಪ್ರಕಾರ ರಸ್ತೆಯಲ್ಲಿ ಚಲಿಸುವಾಗ ಲಾರಿಗಳಿಗೆ ಯಾರಾದರು ಬಂದು ಆಕಸ್ಮಿಕವಾಗಿ ಡಿಕ್ಕಿ ಹೊಡೆದರೆ, ಚಾಲಕರ ವಾಹನದಲ್ಲಿ ತೊಂದರೆಯಾದಲ್ಲಿ ಡಿಕ್ಕಿ ಹೊಡೆದು ತೊಂದರೆ ಅಥವಾ ಪ್ರಯಾಣಿಕರು ಮೃತಪಟ್ಟರೆ ಲಾರಿ ಚಾಲಕರನ್ನು ಹೊಣೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ಜಾರಿಗೊಳಿಸಲು ಮುಂದಾಗಿದೆ. ಈ ಬಗ್ಗೆ ಲಾರಿ ಮಾಲೀಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ತರಾತುರಿಯಲ್ಲಿ ಕಾನೂನು ಜಾರಿಗೊಳಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಸರಕು ಸಾಗಾಣಿಕೆ ವಾಹನ ಮಾಲೀಕರ ಸಂಘದ ಅಧ್ಯಕ್ಷ ಕಲೀಲ್, ಸುನಿಲ್, ಟಿಪ್ಪರ್ ಲಾರಿ ಮಾಲೀಕರ ಸಂಘದ ಚನ್ನಸಂದ್ರ ಮಧು, ಕಾಳೇಗೌಡ, ಸುರೇಶ್, ಮಲ್ಲೇಶ್, ಕಾಂತರಾಜು, ನಂಜುಂಡಸ್ವಾಮಿ, ರವಿ, ರಾಜೇಶ್, ವೆಂಕಟೇಶ್, ರಾಮಣ್ಣ, ಶೇಖರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಪ್ರತಿಭಟನೆ

ಮಳವಳ್ಳಿ: ಲಾರಿ ಚಾಲಕರಿಗೆ ಮತ್ತು ಮಾಲೀಕರಿಗೆ ಕೇಂದ್ರ ಸರ್ಕಾರ ಹೊಸದಾಗಿ ಅದೇಶ ಹೊರಡಿಸಿರುವ ಹಿಟ್ ಅಂಡ್ ರನ್ ಪ್ರಕರಣಗಳ ಸೆಕ್ಷನ್ 106/1 ಮತ್ತು 106/2ನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಶ್ರೀಲಕ್ಷ್ಮಿ ಲಾರಿ ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರದ ಎದುರು ಸೇರಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ನಿಯಮದ ಪ್ರಕಾರ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಚಾಲರಿಗೆ 10 ವರ್ಷ ಜೈಲು, 7 ಲಕ್ಷ ದಂಡ ವಿಧಿಸಬಹುದು ಎಂಬ ನಿಯಮದಿಂದ ಚಾಲರಿಗೆ ಹಾಗೂ ಮಾಲೀಕರಿಗೆ ಹೆಚ್ಚಿನ ತೊಂದರೆಯಾಗಿದೆ. ಕೂಡಲೇ ನಿಯಮವನ್ನು ವಾಸಪ್ ಪಡೆಯಬೇಕೆಂದು ಒತ್ತಾಯಿಸಿದರು.ಕೆಲಕಾಲ ಮಳವಳ್ಳಿ - ಕೊಳ್ಳೇಗಾಲ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಶ್ರೀ ಲಕ್ಷ್ಮಿ ಲಾರಿ ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಯರಾಮು, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಭರತ್‌ ರಾಜ್, ಸಿಐಟಿಯೂ ಮುಖಂಡ ರಾಮಕೃಷ್ಣ, ಗುರುಸ್ವಾಮಿ, ಸಂಘದ ಪದಾಧಿಕಾರಿಗಳಾದ ರಮೇಶ್, ವೆಂಕಟೇಶ, ಕಲ್ಲೇಶ್, ಸಿದ್ದರಾಜು,ಮನು, ಚಂದ್ರಣ್ಣ,ಮಹದೇವಸ್ವಾಮಿ, ದೇವರಾಜು, ನಾಗರಾಜು, ಮಧು ಸೇರಿದಂತೆ ಇತರರು ಇದ್ದರು.

Share this article