ಕನ್ನಡಪ್ರಭ ವಾರ್ತೆ ಮಂಡ್ಯ ಭೀಕರ ಬರಗಾಲದಿಂದ ಒಣಗುತ್ತಿರುವ ಬೆಳೆ ರಕ್ಷಣೆಗಾಗಿ ಕೂಡಲೇ ನಾಲೆಗಳಲ್ಲಿ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿ ಮನವಿ ಸಲ್ಲಿಸಿದರು.ಬರದಿಂದ ತತ್ತರಿಸಿರುವ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಎಕರೆ ಒಂದಕ್ಕೆ ೨೫ ಸಾವಿರ ರು. ಪರಿಹಾರ ಘೋಷಿಸಬೇಕು. ರೈತರ ಎಲ್ಲಾ ಕೃಷಿ ಸಾಲ ರಾಷ್ಟ್ರೀಕೃತ ಬ್ಯಾಂಕ್ ಸಹಕಾರಿ ಬ್ಯಾಂಕ್, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಚಿನ್ನ, ಒಡವೆ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.
ನಾಲೆಗಳಿಗೆ ನೀರನ್ನು ಹರಿಸಿ ಅಲ್ಪಸ್ವಲ್ಪ ಉಳಿದಿರುವ ಬೆಳೆಗಳ ರಕ್ಷಣೆಗೆ ಕ್ರಮ ವಹಿಸುವ ಜೊತೆಗೆ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಿ ಅನುಕೂಲ ಮಾಡಿಕೊಡುವುದು. ರೈತರ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಅಕ್ರಮ-ಸಕ್ರಮ ಮರು ಜಾರಿಗೆ ಕ್ರಮ ವಹಿಸಬೇಕು. ಅವಶ್ಯವಿರುವ ಕಡೆ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಗುಣಮಟ್ಟದ ತ್ರೀ-ಫೇಸ್ ನಿರಂತರ ೮ ಗಂಟೆಗೆ ವಿದ್ಯುತ್ ಕೊಡಬೇಕು ಎಂದು ಆಗ್ರಹಿಸಿದರು.ಕೊಬ್ಬರಿ ಬೆಲೆ ನೀತಿಯಿಂದ ರೈತರಿಗೆ ನಷ್ಟ ಉಂಟಾಗುತ್ತಿದ್ದು, ಕ್ವಿಂಟಾಲೊಂದಕ್ಕೆ ೧೮ ಸಾವಿರ ರು.ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳು ನಿರಂತರ ಕಾರ್ಯ ನಿರ್ವಹಿಸಬೇಕು, ಒಣಗಿದ ತೆಂಗಿನ ಮರಗಳಿಗೆ ಜೀವಿತಾವಧಿ ಲೆಕ್ಕದಲ್ಲಿ ಒಂದು ಮರಕ್ಕೆ ೨೫ ಸಾವಿರ ರು. ಪರಿಹಾರ ಘೋಷಿಸುವಂತೆ ಒತ್ತಾಯಿಸಿದರು.
ರೈತರ ಮುಖ್ಯ ಬೆಳೆ ಕಬ್ಬನ್ನು ವಿಮೆ ವ್ಯಾಪ್ತಿಗೆ ತರಬೇಕು ಮತ್ತು ಕಬ್ಬಿನ ಬೆಳೆ ನಷ್ಟಕ್ಕೆ ಎಕರೆಗೆ ೪೦ ಸಾವಿರ ರು. ಪರಿಹಾರ ಕೊಡುವುದು. ಖಾಸಗಿ ಸಕ್ಕರೆ ಕಾರ್ಖಾನೆಗಳ ಇಳುವರಿ ಆಧಾರಿತ ಬೆಲೆ ನೀತಿಯ ಮೌಢ್ಯದರ ಕೊಡುವುದನ್ನು ತಪ್ಪಿಸಿ ಸಮತೋಲನ ಬೆಲೆ ನೀಡುವಂತೆ ಆಗ್ರಹಿಸಿದರು.ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಸುಮಾರು ೨೧ ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದು, ಮಾರುಕಟ್ಟೆಯಲ್ಲಿನ ಅವೈಜ್ಞಾನಿಕ ಬೆಲೆ ನೀತಿಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ರೇಷ್ಮೆ ಗೂಡಿಗೆ ಕೆ.ಜಿ.ಒಂದಕ್ಕೆ ೬೦೦-೭೦೦ ರು. ಸಮತೋಲನ ದರ ನಿಗದಿಪಡಿಸಬೇಕು. ರೇಷ್ಮೆ ಬೆಳೆಗೆ ರೈತರನ್ನು ಉತ್ತೇಜಿಸಲು ಕಾರ‌್ಯಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿದ್ದು, ಭದ್ರತಾ ಪಿಂಚಣಿ, ಹದ್ದುಬಸ್ತು, ಪೋಡಿ, ಖಾತೆ ಇತ್ಯಾದಿ ಕೆಲಸಗಳಿಗೆ ತಿಂಗಳುಗಟ್ಟಲೆ ಅಲೆದರೂ ಪರಿಹಾರ ಸಿಗುತ್ತಿಲ್ಲ. ಕೂಡಲೇ ಕ್ರಮ ಕೈಗೊಂಡು ಶೀಘ್ರ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸಬೇಕು. ಸರ್ಕಾರದ ರಾಜಧನ ಸೋರಿಕೆ ತಡೆಗಟ್ಟಬೇಕು ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಮುಖಂಡರಾದ ಇಂಡುವಾಳು ಚಂದ್ರಶೇಖರ್, ಕೀಳಘಟ್ಟ ನಂಜುಂಡಯ್ಯ, ಅಣ್ಣೂರು ಮಹೇಂದ್ರ, ರಾಮಕೃಷ್ಣಯ್ಯ, ನಾಗರಾಜು, ಸೀತಾರಾಮು, ಬಸವರಾಜು, ಶಿವಲಿಂಗಯ್ಯ, ಸುರೇಶ, ಕಾಂತರಾಜು, ಪುಟ್ಟಸ್ವಾಮಿ, ಎಚ್.ಜಿ.ಪ್ರಭುಲಿಂಗು, ಕೆ.ನಾಗೇಂದ್ರಸ್ವಾಮಿ, ಸೋ.ಪಿ. ಪ್ರಕಾಶ, ಬೋರಲಿಂಗೇಗೌಡ ಇತರರಿದ್ದರು.