ಲೋಕಾ ದಾಳಿ ವಿರೋಧಿಸಿ ಶಾಸಕರ ಬೆಂಬಲಿಗರಿಂದ ಪ್ರತಿಭಟನೆ

KannadaprabhaNewsNetwork |  
Published : Feb 22, 2026, 02:15 AM IST
ಲಕ್ಷ್ಮೇಶ್ವರದಲ್ಲಿ ಡಾ.ಚಂದ್ರು ಲಮಾಣಿ ಆಸ್ಪತ್ರೆಯ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿ ಹೊರಹೊಮ್ಮುತ್ತಿದ್ದ ಶಾಸಕ ಡಾ. ಚಂದ್ರು ಲಮಾಣಿ ಅವರ ಧ್ವನಿಯನ್ನು ದಮನ ಮಾಡಲು ಕಾಂಗ್ರೆಸ್ ನಾಯಕರು ಸಂಚು ರೂಪಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗದಗ: ಶಾಸಕ ಡಾ. ಚಂದ್ರು ಲಮಾಣಿ ಅವರ ವಿರುದ್ಧ ನಡೆದ ಲೋಕಾಯುಕ್ತ ದಾಳಿ ಪ್ರಕರಣ ವಿರೋಧಿಸಿ ಶಾಸಕರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಶನಿವಾರ ಸಂಜೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಭಾರೀ ಪ್ರತಿಭಟನೆ ನಡೆಸಿದರು.ಲಕ್ಷ್ಮೇಶ್ವರದ ಮಹಾಕವಿ ಪಂಪ್ ಸರ್ಕಲ್ ಬಳಿ ಇರುವ ಶಾಸಕರಿಗೆ ಸಂಬಂಧಿಸಿದ ಬಾಲಾಜಿ ಆಸ್ಪತ್ರೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಹಾಗೂ ಶಾಸಕರ ಕಚೇರಿ ಸುತ್ತಮುತ್ತ ಜನಸಾಗರವೇ ಹರಿದುಬಂತು. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಜನರನ್ನು ಚದುರಿಸಿದರು.ಲೋಕಾಯುಕ್ತ ವಿಚಾರಣೆ ಆಸ್ಪತ್ರೆಯ ಕಚೇರಿಯಲ್ಲೇ ಮುಂದುವರಿಯುತ್ತಿದ್ದಂತೆ ಕಚೇರಿ ಹೊರಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕರ ಬೆಂಬಲಿಗರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳು ಕೇಳಿಬಂದವು.

ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿ ಹೊರಹೊಮ್ಮುತ್ತಿದ್ದ ಶಾಸಕ ಡಾ. ಚಂದ್ರು ಲಮಾಣಿ ಅವರ ಧ್ವನಿಯನ್ನು ದಮನ ಮಾಡಲು ಕಾಂಗ್ರೆಸ್ ನಾಯಕರು ಸಂಚು ರೂಪಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವಿಶೇಷವಾಗಿ ಬಂಜಾರ ಸಮುದಾಯದ ಶಾಸಕರನ್ನೇ ಟಾರ್ಗೆಟ್ ಮಾಡಿ ತುಳಿಯುವ ಹುನ್ನಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು. ಇದೇ ವೇಳೆ ಲೋಕಾಯುಕ್ತ ವಿಚಾರಣೆ ನಡೆಯುತ್ತಿರುವಾಗ, ಶಾಸಕರ ಕಚೇರಿಗೆ ನುಗ್ಗಲು ಕೆಲವು ಕಾರ್ಯಕರ್ತರು ಯತ್ನಿಸಿದ ಘಟನೆ ನಡೆಯಿತು. ಕಾರ್ಯಕರ್ತರ ತಂಡ ಕಚೇರಿಗೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ತಡೆಯುತ್ತಿದ್ದಂತೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕೆಲಕಾಲ ಶಾಸಕರ ಕಚೇರಿ ಎದುರು ಭಾರೀ ಹೈಡ್ರಾಮಾ ನಡೆಯಿತು.ಲೋಕಾಯುಕ್ತ ಪೊಲೀಸರು ಕಚೇರಿಗೆ ಹಣ ಎಣಿಸುವ ಯಂತ್ರವನ್ನು ತರಿಸಿ ಹಣ ಎಣಿಕೆ ಮಾಡಿದ್ದಾರೆ. ಜತೆಗೆ ಶಾಸಕರ ಒಡೆತನದ ಬಾಲಾಜಿ ಆಸ್ಪತ್ರೆಯ ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ರಾತ್ರಿ 9 ಗಂಟೆಯಾದರೂ ಶಾಸಕರು ಹಾಗೂ ಅವರ ಆಪ್ತ ಕಾರ್ಯದರ್ಶಿಗಳನ್ನು ಆಸ್ಪತ್ರೆಯಿಂದ ಲೋಕಾಯುಕ್ತ ಅಧಿಕಾರಿಗಳು ಹೊರಕ್ಕೆ ಕರೆ ತಂದಿಲ್ಲ. ಆಸ್ಪತ್ರೆಯ ಹೊರಗೆ ಜನ ಸೇರಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲೇ ವಿಚಾರಣೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಡ್ತಿ - ಅಘನಾಶಿನಿ ಯೋಜನೆಯನ್ನು ಸಂಘಟಿತವಾಗಿ ನಿಲ್ಲಿಸಿ: ಸ್ವರ್ಣವಲ್ಲಿ ಶ್ರೀ
ಅಪರಾಧವನ್ನು ದ್ವೇಷಿಸಿ ವಿನಃಅಪರಾಧಿಯನ್ನಲ್ಲ: ಹೈಕೋರ್ಟ್‌