ಗಾಂಧೀ ಹುತಾತ್ಮ ದಿನ ನಿವೃತ್ತ ಸರ್ಕಾರಿ ನೌಕರರ ಪ್ರತಿಭಟನೆ

KannadaprabhaNewsNetwork | Published : Jan 31, 2025 12:47 AM

ಸಾರಾಂಶ

ಗುಂಡ್ಲುಪೇಟೆಯಲ್ಲಿ ನಿವೃತ್ತ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬುಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

೭ನೇ ವೇತನ ಆಯೋಗದಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ ಆಗಿರುವ ಆರ್ಥಿಕ ನಷ್ಟದ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಆಶ್ರಯದಲ್ಲಿ ನಿವೃತ್ತ ಸರ್ಕಾರಿ ನೌಕರರು ಮಹಾತ್ಮ ಗಾಂಧೀ ಅವರ ಹುತಾತ್ಮ ದಿನವಾದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬುಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರು ಮಾತನಾಡಿ, ಕಳೆದ ೨೦೨೨ ಜು.೧ ರಿಂದ ೨೦೨೪ ಜು.೧ರ ಅವಧಿಯಲ್ಲಿ ೨೫ ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ೭ನೇ ವೇತನ ಆಯೋಗದ ಅನುಷ್ಟಾನದಲ್ಲಿ ನಿವೃತ್ತಿ ಉಪಲಬ್ದಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿದೆ ಎಂದು ಆರೋಪಿಸಿದರು. ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿ/ನೌಕರರಂತೆ ನಿವೃತ್ತ ನೌಕರರು ೨೦೨೨ ಜು.೧ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸ (Arrears) ಕೇಳುತ್ತಿಲ್ಲ. ಬದಲಾಗಿ ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಜಿ ಕಮ್ಯುಟೇಶನ್ ಹಾಗೂ ಗಳಕೆ ರಜೆ ನಗದೀಕರಣಗಳ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಮಾತ್ರ (One Time Settlement) ಕೇಳುತ್ತಿದ್ದೇವೆ ಎಂದರು.

ಬೇಡಿಕೆ ಬಗ್ಗೆ ಇತ್ತೀಚಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಸುವರ್ಣಸೌಧದ ಮುಂದೆ ೨೦೨೪ ಡಿ.೧೬ ರಂದು ರಾಜ್ಯದ ಎಲ್ಲ ಜಿಲ್ಲೆಗಳಿಂದ ೨೦ಸಾವಿರಕ್ಕೂ ಹೆಚ್ಚು ನೌಕರರು ಸಮಾವೇಶ ನಡೆಸಿದಾಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮನವಿಯನ್ನು ಸ್ವೀಕರಿಸಿ ಸಭೆ ಕರೆದು ಚರ್ಚಿಸೋಣ ಎಂದಿದ್ದರು ಇಲ್ಲಿಯ ತನಕ ಸಭೆ ಕರೆದಿಲ್ಲ ಎಂದು ಆರೋಪಿಸಿದರು.

ನಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗಾಂಧೀ ಹುತಾತ್ಮರಾದ ಜ.೩೦ರಂದು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ರ ಮೂಲಕ ಮನವಿ ಪತ್ರ ಸಲ್ಲಿಸಿದರು. ಈ ಸಮಯದಲ್ಲಿ ನಿವೃತ್ತ ಸರ್ಕಾರಿ ನೌಕರರಾದ ಕೆ.ಎನ್.ಶಿವಸ್ವಾಮಿ ಸೇರಿದಂತೆ ಹಲವರಿದ್ದರು.

Share this article