ಬಸ್ ದರ ಹೆಚ್ಚಳ ವಿರೋಧಿಸಿ ಆರ್ ಪಿಐ ನಿಂದ ಪ್ರತಿಭಟನೆ

KannadaprabhaNewsNetwork |  
Published : Jan 09, 2025, 12:45 AM IST
ಸಿಕೆಬಿ-1 ಕೆಎಸ್ ಆರ್ ಟಿಸಿ ಬಸ್ ದರ ಹೆಚ್ಚಳ ವಿರೋಧಿಸಿ ಆರ್ ಪಿಐ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ಸಾಮಾನ್ಯ, ಮಧ್ಯಮ ಮತ್ತು ಕೆಳವರ್ಗದ ಜನ ಪ್ರಯಾಣಿಸುವ ಬಸ್ ದರ ಏರಿಕೆ ಮಾಡಿರುವುದಕ್ಕೆ ತಾವು ಕೂಡಲೇ ಜನರ ಕ್ಷಮೆ ಕೇಳಿ ದರ ಏರಿಕೆ ನಿರ್ಧಾರ ಕೈಬಿಡಬೇಕು. ಇಲ್ಲವಾದಲ್ಲಿ ತಮ್ಮ ಸರ್ಕಾರದ ನಿರ್ಧಾರವನ್ನು ಖಂಡಿಸಿ ರಾಜ್ಯದಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವುದನ್ನುಖಂಡಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್‌ಪಿಐ) ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಆರ್‌ಪಿಐನ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ವೆಂಕಟರಮಣಪ್ಪ ಮಾತನಾಡಿ, ಹಲವು ಹಗರಣಗಳ ಹಂಗಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ವಿವೇಚನೆ ರಹಿತ ನಿರ್ಧಾರಗಳನ್ನು ತೆಗೆದುಕೊಂಡು ನಾಡಿನ ಜನತೆಯ ಶಾಪಕ್ಕೆ ಒಳಗಾಗಿದೆ. ಒಂದರ ಮೇಲೊಂದು ನಿರ್ಧಾರಗಳನ್ನು ಅನುಷ್ಠಾನಗೊಳಿಸಲು ಹೊರಟು ಜನ ವಿರೋಧಿ ನಡೆಯಲ್ಲಿ ಹೆಜ್ಜೆ ಹಾಕುತ್ತಿದೆ. ಸಾರಿಗೆ ಬಸ್ ಟಿಕೆಟ್ ದರವನ್ನು ಹೆಚ್ಚಿಸಿ ಸಂಕಷ್ಟದಲ್ಲಿರುವ ನಾಡಿನ ಜನತೆಗೆ ದ್ರೋಹ ಬಗೆದಿದ್ದೀರಿ. ಬಸ್ ಪ್ರಯಾಣ ದರವು ಇದೇ ಜನವರಿ 5ರಿಂದ ಅನ್ವಯ ಆಗುವಂತೆ ಆದೇಶಿಸಿರುವುದು ಮತ್ತು ಸಾರಿಗೆ ನೌಕರರ ಸಂಬಳ ಸರಿದೂಗಿಸಲು ಇಂತಹ ದೊಡ್ಡ ಮೊತ್ತದ ಹೊರೆಯನ್ನು ಪ್ರಯಾಣಿಕರ ಮೇಲೆ ತಂದಿಟ್ಟಿದೆ. ಶಕ್ತಿ ಗ್ಯಾರಂಟಿ ಯೋಜನೆಯು ಸಮರ್ಥವಾಗಿ ಅನುಷ್ಠಾನಗೊಳ್ಳದೆ ಒಂದು ಕೈನಲ್ಲಿ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ನಿಮ್ಮ ಸರಕಾರದ ಇಬ್ಬಗೆ ಧೋರಣೆಯನ್ನು ರಾಜ್ಯದ ಜನರು ಎಂದೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರುವ ಹಣವನ್ನು ನಿಮ್ಮ ಪಂಚ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದೀರಿ, 2013ರಲ್ಲಿ ಮೊದಲ ಅವಧಿಗೆ ಮುಖ್ಯಮಂತ್ರಿಯಾದಾಗ ಉತ್ತಮ ಆಡಳಿತ ನೀಡಿದ ನೀವು ಎರಡನೇ ಅವಧಿಯಲ್ಲಿ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರ ಹಿಡಿದಿರಿ, ಆದರೆ ಗ್ಯಾರಂಟಿಗಳ ಹಣ ಸರಿದೂಗಿಸಲು ಪೆಟ್ರೋಲ್, ಡೀಸೆಲ್ ಮೇಲೆ ಸೆಸ್, ಆಸ್ತಿ ತೆರಿಗೆ, ನೋಂದಣಿ ತೆರಿಗೆ, ನಿತ್ಯಾವಶ್ಯಕ ವಸ್ತುಗಳ ಮೇಲೆ ತೆರಿಗೆ ಹೇರಿ ರಾಜ್ಯದ ಬಡ, ಮಧ್ಯಮ ವರ್ಗಗಳ ಜೀವನ ಮಟ್ಟ ಕುಸಿಯುವಂತೆ ಮಾಡಿದ್ದೀರಿ. ನಾನು ಅಹಿಂದ ಪರ ಎಂದು ಹೇಳಿ ಅಲ್ಪ ಸಂಖ್ಯಾತ, ಹಿಂದುಳಿದ ಮತ್ತು ದಲಿತ ಮತಗಳನ್ನು ಪಡೆದು ಈಗ ಅದೇ ಜನರ ಅಭಿವೃದ್ಧಿ ನಿಗಮಗಳಲ್ಲಿ ಲೂಟಿ ದಂಧೆಯು ಅವ್ಯಾಹತವಾಗಿ ನಡೆದಿವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಸಾಮಾನ್ಯ, ಮಧ್ಯಮ ಮತ್ತು ಕೆಳವರ್ಗದ ಜನ ಪ್ರಯಾಣಿಸುವ ಬಸ್ ದರ ಏರಿಕೆ ಮಾಡಿರುವುದಕ್ಕೆ ತಾವು ಕೂಡಲೇ ಜನರ ಕ್ಷಮೆ ಕೇಳಿ ದರ ಏರಿಕೆ ನಿರ್ಧಾರ ಕೈಬಿಡಬೇಕು. ಇಲ್ಲವಾದಲ್ಲಿ ತಮ್ಮ ಸರ್ಕಾರದ ನಿರ್ಧಾರವನ್ನು ಖಂಡಿಸಿ ರಾಜ್ಯದಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಆರ್ ಪಿಐ ನ ಜಿ.ಎನ್.ವಿ.ಬಾಬು, ನಾರಾಯಣಪ್ಪ, ಜಿ. ಅಶ್ವತಮ್ಮ, ಈ ಧರೆ ಪ್ರಕಾಶ್, ಜಿ.ಈಶ್ವರಪ್ಪ, ಮುನಿ ಆಂಜಿನಪ್ಪ, ದೇವು, ಗೌರೀಶ್, ಹರೀಶ್ ಶ್ರೀನಿವಾಸ್, ವೆಂಕಟರಮಣಪ್ಪ,ಎಂ.ವಿಜಯಕುಮಾರ್, ಪ್ರಕಾಶ್, ಹರಿಪ್ರಸಾದ್, ರಾಮಕೃಷ್ಣ, ಅಂಜಿನಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ