ದಾಂಡೇಲಿ: ನಗರದ ಜೆ.ಎನ್. ರಸ್ತೆಯಲ್ಲಿರುವ ಕೇಂದ್ರ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಬಸ್ ನಿಲ್ದಾಣದಲ್ಲಿ ಶನಿವಾರ ಬಸ್ ತಡೆದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ನಿರ್ದೇಶಕ ಫಿರೋಜ್ ಪೀರಜಾದೆ ಮಾತನಾಡಿ, ನಿಲ್ದಾಣ ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು, ಬಿರುಕುಬಿಟ್ಟು ಶಿಥಿಲಾವಸ್ಥೆಗೆ ತಲುಪಿದೆ. ನಿಲ್ದಾಣವನ್ನು ಉನ್ನತ ದರ್ಜೆಗೇರಿಸಲು ನಾವು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾವು ಅನಿವಾರ್ಯವಾಗಿ ಬಸ್ ತಡೆದು ಪ್ರತಿಭಟನೆ ನಡೆಸಬೇಕಾಯಿತು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬಸ್ ನಿಲ್ದಾಣಗಳೆಲ್ಲವೂ ಹೈಟೆಕ್ ಆಗಿ ಪರಿವರ್ತನೆಗೊಂಡಿವೆ. ಆದರೆ ದಾಂಡೇಲಿ ತಾಲೂಕಿನ ಬಸ್ ನಿಲ್ದಾಣವನ್ನು ಉನ್ನತ ದರ್ಜೆಗೇರಿಸಲು ಮೀನಮೇಷ ಎಣಿಸಲಾಗುತ್ತಿದೆ. ಮಲತಾಯಿ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಎರಡು ವರ್ಷಗಳ ಹಿಂದೆ ಆರ್‌ಟಿಒ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಸ್ಥಳೀಯ ಶಾಸಕರಿಗೂ ಹಾಗೂ ದಾಂಡೇಲಿಗೆ ಬಂದಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಲ್ಲಿ ಬಸ್ ನಿಲ್ದಾಣವನ್ನು ಉನ್ನತ ದರ್ಜೆಗೇರಿಸಲು ಬೇಡಿಕೆ ಇಟ್ಟಿದ್ದೇವು. ಆಗ ಅವರು ಭರವಸೆ ಕೊಟ್ಟಿದ್ದರು. ಆದರೆ ಆ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಾನವ ಹಕ್ಕುಗಳ ಸಂಸ್ಥೆ ವತಿಯಿಂದ ಸಾರ್ವಜನಿಕರೊಂದಿಗೆ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಂಘಟನೆಯ ಪ್ರಮುಖರಾದ ರವಿ ಸುತಾರ, ದಾದಾಪೀರ್ ನವದಗಿ, ಮುರ್ತುಜಾ ಹುಸೇನ್ ಆನೆಹೊಸೂರ್, ಅಬ್ದುಲ್ ರಜಾಕ್, ಭಾಗ್ಯಶ್ರಿ ಮನ್ನೂರ್, ಶಾಮ್ ಬೆಂಗಳೂರು, ಪ್ರಭಾವತಿ, ಸಂಗೀತಾ, ಲಕ್ಷ್ಮಿ, ಭಾಗ್ಯಾ, ಜಯಲಲಿತಾ, ಅಭಿನಾಶ, ಮಾಧಾರ, ವಿ.ಕೆ. ಸಿಂಗ್, ಶಬೀರ್, ಆದಪ್ಪಾ ಕೆ, ಶೇಹಜಾದಿ, ಶಮೀಮ ಇದ್ದರು.