ಗದಗ: ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಬೀದಿ ವ್ಯಾಪಾರಿಗಳು ಸಂಕಷ್ಟದ ಸ್ಥಿತಿಯಲ್ಲಿದ್ದು, ಅದನ್ನು ಖಂಡಿಸಿ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ರೋಣ, ನರಗುಂದ, ಗದಗ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಬೀದಿ ವ್ಯಾಪಾರಿಗಳು ಸೋಮವಾರ ಗದಗ ನಗರದ ಜಿಲ್ಲಾಡಳಿತದ ಮುಂದೆ ಬೃಹತ್ ಪ್ರತಿಭಟನೆ ನಡೆಸಿ, ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬೀದಿಬದಿ ವ್ಯಾಪಾರಿಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಪಾಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ ಮಾತನಾಡಿ, ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ಬೀದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸದಿದ್ದರೆ ನಿರಂತರ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಜೀವನೋಪಾಯ ಅಧಿನಿಯಮ ಹಾಗೂ ಬೀದಿ ವ್ಯಾಪಾರಿಗಳ ನಿಯಂತ್ರಣ ಮತ್ತು ಸಂರಕ್ಷಣಾ ಕಾಯ್ದೆ 2014ರ ಪ್ರಕಾರ ಕರ್ನಾಟಕ ರಾಜ್ಯ 2019ರಲ್ಲಿ ಅಧಿಸೂಚನೆ ಹೊರಡಿಸಲಾಯಿತು. ನಂತರ ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿ ವ್ಯಾಪಾರಿಗಳಿಂದ ಚುನಾಯಿತ ಪ್ರತಿನಿಧಿ ಆಯ್ಕೆ ಮಾಡುವ ಮೂಲಕ ಪಟ್ಟಣ ಮಾರಾಟ ಸಮಿತಿ ರಚಿಸಲಾಯಿತು. ಪಟ್ಟಣ ಮಾರಾಟ ಸಮಿತಿಯು ನಗರ ವಸತಿ ಮಂತ್ರಾಲಯ ಸಚಿವರಿಂದ ಬೀದಿ ವ್ಯಾಪಾರಿಗಳ ಕುಂದು-ಕೊರತೆಗಳು ಹಾಗೂ ಅಭಿವೃದ್ಧಿಯ ವಿಚಾರವಾಗಿ ಪಟ್ಟಣ ಮಾರಾಟ ಸಮಿತಿಯ ತೀರ್ಮಾನವೇ ಅಂತಿಮ ಎಂಬುದನ್ನು ರಾಜ್ಯದ ಎಲ್ಲ ಕೌಶಲ್ಯಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಗದಗ ಜಿಲ್ಲೆಗೆ ₹3.95 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಸಮುದಾಯ ಸಂಘಟನಾ ಅಧಿಕಾರಿಗಳ ಸಭೆಯ ಗಮನಕ್ಕೆ ತರದೇ, ತಮಗೆ ಬೇಕಾದಷ್ಟು ಹಣ ಬಳಕೆ ಮಾಡಿಕೊಂಡು ಇನ್ನುಳಿದ ₹2.50 ಕೋಟಿ ಹಿಂತಿರುಗಿಸಿದ್ದಾರೆ. ಬೀದಿ ವ್ಯಾಪಾರಿಗಳಿಂದ ಪ್ರತಿನಿತ್ಯ ಶುಲ್ಕ ಸಂಗ್ರಹ ಮಾಡಿ ಪಟ್ಟಣ ಮಾರಾಟ ಸಮಿತಿಗೆ ಜಮೆ ಮಾಡಲು ರಾಜ್ಯ ಅಭಿಯಾನ ನಿರ್ದೇಶಕರು ನಿರ್ದೇಶನ ನೀಡಿದರು. ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಬೀದಿ ವ್ಯಾಪಾರಿಗಳ ಸಭೆ ಮಾಡಿದಂತೆ ಮಾಡಿ, ಶುಲ್ಕ ಸಂಗ್ರಹ ಮಾಡುತ್ತಿದ್ದಾರೆ. ಇದರಿಂದ ಬೀದಿ ವ್ಯಾಪಾರಿಗಳಿಗೆ ತೊಂದರೆ ಆಗುತ್ತಿದೆ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬೀದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಸೊಳಂಕಿ, ಶಹರ ಘಟಕದ ಅಧ್ಯಕ್ಷ ಮುಕ್ತುಂಸಾಬ್ ನರಗುಂದ, ಜಹಾಂಗಿರ ಮುಳಗುಂದ, ರಾಜು ರೋಣದ, ರೇಣುಕಾ ಹತ್ತಿವಾಲೆ, ರಶೀದಾ ನದಾಫ್, ದಾದು ಮುಂಡರಗಿ ಉಪಸ್ಥಿತರಿದ್ದರು.
ಎಚ್.ಕೆ. ಪಾಟೀಲಗೆ ಮನವಿ: ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಲು ತೆರಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಪ್ರತಿಭಟನಾಕಾರರ ಬಳಿ ಬಂದು ಅವರ ಸಮಸ್ಯೆಗಳನ್ನು ಆಲಿಸಿ ಮನವಿ ಪತ್ರವನ್ನು ಪಡೆದು ಶೀಘ್ರದಲ್ಲೇ ಜಿಲ್ಲಾಧಿಕಾರಿ ಹಾಗೂ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು ಸಮಸ್ಯೆ ಬಗೆಹರಿಯುವರೆಗೂ ಹೋರಾಟ ಕೈ ಬಿಡದಿರಲು ನಿರ್ಧರಿಸಿದರು.