ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬೆಂಬಲಿಗರ ಪ್ರತಿಭಟನೆ

KannadaprabhaNewsNetwork | Published : Dec 22, 2024 1:31 AM

ಸಾರಾಂಶ

ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಸದಸ್ಯತ್ವ ವಜಾಗೊಳಿಸುವಂತೆ ಆಗ್ರಹಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬೆಂಬಲಿಗರು ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಸದಸ್ಯತ್ವ ವಜಾಗೊಳಿಸುವಂತೆ ಆಗ್ರಹಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬೆಂಬಲಿಗರು ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಸಿಪಿಎಡ್‌ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಚನ್ನಮ್ಮ ವೃತ್ತದಲ್ಲಿ ಸಿ.ಟಿ. ರವಿ ಅಣಕು ಶವಯಾತ್ರೆ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಸಿ.ಟಿ. ರವಿ ಲಕ್ಷ್ಮೀ ಹೆಬ್ಬಾಳಕರಗೆ ಅಷ್ಟೇ ಅಲ್ಲ ಇಡೀ ಸ್ತ್ರೀಕುಲಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಸಿ.ಟಿ.ರವಿ ಕ್ಷಮೆ ಯಾಚಿಸಬೇಕು, ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಿ‌.ಟಿ ಅಣಕು ಪ್ರತಿಕೃತಿಗೆ ಸೀರೆ ಉಡಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಿ.ಟಿ. ರವಿ ವಿರುದ್ಧ ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ಸುವರ್ಣವಿಧಾನಸೌಧಕ್ಕೆ ನುಗ್ಗಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ ಪಾಟೀಲ ಸೇರಿ ಹೆಬ್ಬಾಳ್ಕರ್ ಸಹಸ್ರಾರು ಅಭಿಮಾನಿಗಳು ಪ್ರತಿಭಟನಾ ಮೆರ‍ಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಸದನದಲ್ಲಿ ಸಿ.ಟಿ. ರವಿ ಅವಾಚ್ಯ ಶಬ್ಧಗಳಿಂದ ಪದೇ ಪದೆ ನಿಂದಿಸಿದ್ದಾರೆ. ಮಹಿಳೆಯರ ಬಗ್ಗೆ ಅವರಿಗೆ ಗೌರವವೇ ಇಲ್ಲ. ಕೂಡಲೇ ಅ‍ವರ ಸದಸ್ಯತ್ವ ರದ್ದುಗೊಳಿಸಬೇಕು. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ವಾಹನಕ್ಕೆ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಬಿಗಿ ಪೊಲೀಸ್‌ ಬಂದೋಬಸ್ತ್‌ ಆಯೋಜಿಸಲಾಗಿತ್ತು.

ಸಿ.ಟಿ. ರವಿ ಮಾತಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೊಂದಿರಬಹುದು. ಆದರೆ, ಎದೆಗುಂದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ್‌ ಹೇಳಿದರು.

ಸಿ.ಟಿ. ರವಿ ಆಡಿದ ಮಾತಿನಿಂದ ತಾಯಿ ಅಷ್ಟೇ ಅಲ್ಲ, ಇಡೀ ಕ್ಷೇತ್ರದ ಜನರು ನೊಂದಿದ್ದಾರೆ. ನನ್ನ ತಾಯಿಯನ್ನು ಇಡೀ ಕ್ಷೇತ್ರದ ಜನರು ಮನೆಮಗಳಂತೆ ಕಾಣ್ತಾರೆ, ಪ್ರೀತಿಸುತ್ತಾರೆ. ಸಿ.ಟಿ. ರವಿ ಆಡಿದ ಮಾತಿನಿಂದ ಬಿಜೆಪಿಯ ನಾಯಕರು ಅಂತರಂಗದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಬಿ.ವೈ ವಿಜಯೇಂದ್ರ, ಆರ್‌. ಅಶೋಕ್‌ ಮನದಲ್ಲಿ ಸಿ.ಟಿ. ರವಿಗೆ ಛೀ.. ಥೂ... ಅಂತಿರ್ತಾರೆ. ಆದರೆ, ಬಿಜೆಪಿ ಹೈಕಮಾಂಡ್ ಒತ್ತಡಕ್ಕೆ ಮಣಿದು ಈ ಇಬ್ಬರು ನಾಯಕರು ರವಿ ಬೆನ್ನಿಗೆ ನಿಂತಿದ್ದಾರೆ.

-ಮಣಾಲ್‌ ಹೆಬ್ಬಾಳಕರ ಕಾಂಗ್ರೆಸ್ ಯುವ ಮುಖಂಡ

Share this article