ಲೀಡ್ ಬ್ಯಾಂಕ್ ಸಭೆಯಲ್ಲಿ ಅಗ್ರಣಿ ಕೆನರಾ ಬ್ಯಾಂಕ್‌ನ ಶೀಜಿತ್ ಕೆ. ವಿವರಣೆಕನ್ನಡಪ್ರಭ ವಾರ್ತೆ ಮಣಿಪಾಲ
ಕಳೆದೊಂದು ವರ್ಷದಲ್ಲಿ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರದಲ್ಲಿ ಶೇ.10.47ರಷ್ಟು ಹೆಚ್ಚಳವಾಗಿದೆ. 2023ರ ಸೆಪ್ಟಂಬರ್ ತ್ರೈಮಾಸಿಕದ ನಂತರ ಒಂದು ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ಯಾಂಕಿಂಗ್ ವ್ಯವಹಾರ 60519 ಕೋಟಿ ರು.ಗೇರಿದೆ, ಅಂದರೆ ನಿವ್ವಳ 3947 ಕೋಟಿ ರು.ಗಳಷ್ಟು ಹೆಚ್ಚಳವಾಗಿದೆ.ಶನಿವಾರ ಇಲ್ಲಿನ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಸಭೆಯಲ್ಲಿ ಅಗ್ರಣಿ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಪ್ರಬಂಧಕ ಶೀಜಿತ್ ಕೆ. ಈ ವಿವರಗಳನ್ನು ನೀಡಿದರು.
ಈ ಅವಧಿಯಲ್ಲಿ ಜಿಲ್ಲೆಯ ಬ್ಯಾಂಕ್‌ಗಳು 19,535 ಕೋಟಿ ರು. ಸಾಲ ವಿತರಿಸಿವೆ. ಇದು ಹಿಂದಿನ ಅವಧಿಗಿಂತ 1787 ಕೋಟಿ ರು. (ಶೇ.10.06) ಹೆಚ್ಚಾಗಿದೆ. 40,984 ಕೋಟಿ ರು. ಠೇವಣಿ ಸಂಗ್ರಹಿಸಿವೆ. ಇದು ಕಳೆದ ಅವಧಿಗಿಂತ 3947 ಕೋಟಿ ರು. (ಶೇ.10.66) ರು. ಹೆಚ್ಚಾಗಿದೆ. ಜಿಲ್ಲೆಯ ಬ್ಯಾಂಕಿಂಗ್ ವ್ಯವಹಾರದಲ್ಲಿ ಸಾಲ ಮತ್ತು ಠೇವಣಿ ಅನುಪಾತದಲ್ಲಿ ಶೇ.0.26ರಷ್ಟು ಇಳಿಕೆಯಾಗಿದೆ. ಹಿಂದಿನ ಅವಧಿಯಲ್ಲಿ ಸಾಲ-ಠೇವಣಿ ಅನುಪಾತ ಶೇ.47.92 ಇದ್ದು, ಈ ಸಾಲಿನಲ್ಲಿ ಶೇ.47.66 ಆಗಿದೆ ಎಂದವರು ವಿವರಣೆ ನೀಡಿದರು.ವಿವಿಧ ಸ್ವದ್ಯೋಗ ಯೋಜನೆಗಳಲ್ಲಿ 7556 ಕೋಟಿ ರು. (ಶೇ.60), ಅತೀಸಣ್ಣ - ಸಣ್ಣ - ಮಧ್ಯಮ ಉದ್ಯಮಗಳಿಗೆ 1979 ಕೋಟಿ (ಶೇ.57.76) ಮತ್ತು ಕೃಷಿ ಸಾಲ ಯೋಜನೆಗಳಲ್ಲಿ 1506 ಕೋಟಿ ರು. (ಶೇ.52.57) ಸಾಲ ನೀಡಲಾಗಿದೆ. ಇದನ್ನು ಶೇ.100ರಷ್ಟು ಪೂರ್ಣಗೊಳಿಸಬೇಕು ಎಂದವರು ಬ್ಯಾಂಕ್‌ಗಳಿಗೆ ಸೂಚನೆ ನೀಡಿದರು.ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ 8800 ಮಂದಿಗೆ 16.70 ಕೋಟಿ ರು. ಸಾಲ ಮಂಜೂರು ಮಾಡಲಾಗಿದ್ದು, ಈಗಾಗಲೇ 8646 ಮಂದಿಗೆ 15.37 ಕೋಟಿ ರು. ಸಾಲ ಹಸ್ತಾಂತರಿಸಾಲಗಿದೆ. ಇದೇ ಅವಧಿಯಲ್ಲಿ ದುರ್ಬಲ ವರ್ಗದವರಿಗೆ ವಿವಿಧ ಯೋಜನೆಗಳಡಿ 1233 ಕೋಟಿ ರು., ಉನ್ನತ ಶಿಕ್ಷಣಕ್ಕಾಗಿ 82.90 ಕೋಟಿ ಮತ್ತು 136 ಕೋಟಿ ರು.ಗಳ ಗೃಹ ನಿರ್ಮಾಣ ಸಾಲವನ್ನೂ ನೀಡಲಾಗಿದೆ ಎಂದವರು ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಮುಖ್ಯ ಯೋಜಾಧಿಕಾರಿ ಉದಯಕುಮಾರ್ ಶೆಟ್ಟಿ, ಬೆಂಗಳೂರಿನ ಆರ್‌ಬಿಐ ವ್ಯವಸ್ಥಾಪಕ ವೆಂಕಟರಾಮಯ್ಯ ಟಿ.ಎನ್. ಉಪಸ್ಥಿತರಿದ್ದರು. ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಹರೀಶ್ ಜಿ. ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿದರು.