ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೋಳಿ ಸಾಕಾಣಿಕೆಯಿಂದ ನೊಣಗಳು ಹೆಚ್ಚಾಗಿ ಹಲವು ಸಾಂಕ್ರಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಕೂಡಲೇ ಕೋಳಿ ಫಾರಂವನ್ನು ತೆರವು ಮಾಡುವಂತೆ ಆಗ್ರಹಿಸಿ ತಾಲೂಕಿನ ಬುಳ್ಳಿಕೆಂಪನದೊಡ್ಡಿ ಗ್ರಾಮಸ್ಥರು ಬಿಲ್ವಾಪ್ರಿಯಾ ಇಂಡಸ್ಟ್ರೀಸ್ ನ ಕೋಳಿ ಫಾರಂ ಎದುರು ಪ್ರತಿಭಟನೆ ನಡೆಸಿದರು.ಮುಖಂಡ ಡಿ.ಕೃಷ್ಣೇಗೌಡ ಮಾತನಾಡಿ, ಗ್ರಾಮದ ಸಮೀಪವೇ ಅನಧಿಕೃತವಾಗಿ ಹಲವು ವರ್ಷಗಳಿಂದ ಕೋಳಿ ಫಾರಂ ನಡೆಸಿಕೊಂಡು ಬರಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯಗೊಂಡು ನೊಣಗಳು ಹೆಚ್ಚಾಗಿ ಗ್ರಾಮದಲ್ಲಿ ಜ್ವರ, ಕೆಮ್ಮು ಸೇರಿದಂತೆ ಹಲವು ಸಾಂಕ್ರಮಿಕ ರೋಗಗಳು ಕಾಣಿಸಿಕೊಳ್ಳುತ್ತಿದೆ. ಒಬ್ಬ ಜ್ವರದಿಂದ ಸಾವನ್ನಪ್ಪಿದ್ದು ಗ್ರಾಮಸ್ಥರು ಭಯ ಭೀತಿಯಿಂದ ಬದುಕುತ್ತಿದ್ದಾರೆಂದು ತಿಳಿಸಿದರು.
ಕೋಳಿ ಫಾರಂ ತೆರವಿಗಾಗಿ ಗ್ರಾಪಂ, ತಾಪಂ, ತಹಸೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಪರಿಸೀಲನೆ ನಡೆಸಿ ತೆರವುಗೊಳಿಸುವುದಾಗಿ ಭರವಸೆ ನೀಡಿದರೂ ಕೂಡ ಕಳೆದ ಎರಡು ದಿನಗಳ ಹಿಂದೆ ಪುನಃ ಕೋಳಿಮರಿಯನ್ನು ತಂದು ಸಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ತಹಸೀಲ್ದಾರ್ ಬಿ.ವಿ ಕುಮಾರ್ ಹಾಗೂ ತಾಪಂ ಇಒ ಎಚ್.ಜಿ ಶ್ರೀನಿವಾಸ್ ಆಗಮಿಸಿ ಈಗಗಲೇ ಕೋಳಿಫಾರಂ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಆದರೂ ಕೋಳಿ ಮರಿಗಳನ್ನು ಸಾಕುತ್ತಿರುವುದು ಕಂಡು ಬಂದಿದೆ. ಸಾರ್ವಜನಿರ ಆರೋಗ್ಯದ ದೃಷ್ಟಿಯಿಂದ ತಾತ್ಕಾಲಿಕವಾಗಿ ಮರಿಗಳನ್ನು ತೆರವುಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಿಂದೆಯೂ ಕೋಳಿ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದೀರಿ. ಯಾವುದನ್ನೂ ಲೆಕ್ಕಿಸದೇ ಪುನಃ ಕೋಳಿಮರಿ ತಂದು ಸಾಕುತ್ತಿದ್ದಾನೆ. ಕೋಳಿಮರಿ ತೆರವುಗೊಳಿಸುವವರೆಗೂ ಪ್ರತಿಭಟನೆ ಹಿಂಪೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕುಳಿತರು.ಇಒ ಶ್ರೀನಿವಾಸ್ ಮಾತನಾಡಿ, ಪಶುಸಂಗೋಪನೆ, ಆರೋಗ್ಯ, ಹಾಗೂ ಪರಿಸರ ಇಲಾಖೆಯಿಂದ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು, ಜಿಲ್ಲಾಧಿಕಾರಿಗಳಿಂದ ಅನುಮತಿ ತಂದರಷ್ಟೇ ಕೋಳಿ ಸಾಕಾಣಿಕೆಗೆ ಅವಕಾಶ ನೀಡಲಾಗುವುದು. ಅಲ್ಲಿಯವರೆವಿಗೂ ಕೋಳಿಫಾರಂ ನಡೆಸಲು ಅವಕಾಶ ನೀಡುವುದಿಲ್ಲ ಎಂದರು.
ಕೋಳಿಮರಿಗಳನ್ನು ತೆರವುಗೊಳಿಸುವಂತೆ ಒಂದು ಗಡವು ನೀಡಲಾಗಿದೆ. ಮಾಲೀಕರು ತೆರವುಗೊಳಿಸದಿದ್ದರೇ ಪೊಲೀಸ್ ಭದ್ರತೆಯಲ್ಲಿ ಗ್ರಾಪಂ ಸಿಬ್ಬಂದಿಯಿಂದ ಕೋಳಿಮರಿಗಳನ್ನು ತೆರವುಗೊಳಿಸಲಾಗುವುದು ಭರವಸೆ ನೀಡಿದರು. ಅಧಿಕಾರಿಗಳ ಮಾತಿಗೆ ಸ್ಪಂದಿಸಿದ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.ಪ್ರತಿಭಟನೆಯಲ್ಲಿ ಸಂಜೀವ್, ಹರೀಶ್, ರಾಜು, ಚಂದನ್, ಶ್ರುತಿ, ರುಕ್ಮುಣಿ, ಮಹಾಲಕ್ಷ್ಮಿ, ಭಾಗ್ಯಮ್ಮ, ಗಾಯಿತ್ರಿ, ಅಭಿ, ನಂಜುಂಡೇಗೌಡ ಸೇರಿದಂತೆ ಇತರರು ಇದ್ದರು.