ಸಿಎಂಗೆ ನೋಟಿಸ್‌ ಖಂಡಿಸಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ

KannadaprabhaNewsNetwork | Published : Aug 6, 2024 12:31 AM

ಸಾರಾಂಶ

ಮುಡಾ ಹಗರಣದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್‌ ಜಾರಿ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟ ಜಂಟಿ ಸಹಭಾಗಿತ್ವದಲ್ಲಿ ಸೋಮವಾರ ದೊಡ್ಡಬಳ್ಳಾಪುರದ ಡಾ.ಬಿ.ಆ‌ರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

-ಬೆಂ.ಗ್ರಾ. ಜಿಲ್ಲಾ ಅಹಿಂದ, ಶೋಷಿತ ಸಮುದಾಯಗಳ ಒಕ್ಕೂಟದಿಂದ ಮಾನವ ಸರಪಳಿ, ಧರಣಿ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಮುಡಾ ಹಗರಣದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್‌ ಜಾರಿ ಮಾಡಿರುವುದನ್ನು ವಿರೋಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಹಿಂದ ಸಂಘಟನೆಗಳ ಒಕ್ಕೂಟ, ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟ ಜಂಟಿ ಸಹಭಾಗಿತ್ವದಲ್ಲಿ ಸೋಮವಾರ ನಗರದ ಡಾ.ಬಿ.ಆ‌ರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ರಾಜ್ಯ ಹೆದ್ದಾರಿ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಮುಖಂಡರು, ಆತುರಾತುರವಾಗಿ ನೋಟಿಸ್ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿದರು.

ವಿವಿಧ ಸಮುದಾಯಗಳ ಮುಖಂಡರಾದ ಜಿ.ಲಕ್ಷ್ಮೀಪತಿ, ಕಂಟನಕುಂಟೆ ಕೃಷ್ಣಮೂರ್ತಿ, ಆದಿತ್ಯ ನಾಗೇಶ್, ಜೆ.ರಾಜೇಂದ್ರ, ಗೋಪಾಲ್ ನಾಯಕ್, ಶ್ರೀನಗರ ಬಶೀರ್ ಮಾತನಾಡಿ, ಮುಡಾ ನಿವೇಶನಗಳನ್ನು ಪಾರ್ವತಿ ಸಿದ್ದರಾಮಯ್ಯ ಅವರಿಗೆ ನೀಡಿದೆ ಎನ್ನಲಾದ ನಿವೇಶನದ ವಿಚಾರವಾಗಿ, ಅಪರಾಧ ಹಿನ್ನೆಲೆಯ ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ದೂರನ್ನು ರಾಜ್ಯಪಾಲರು ಕೂಲಂಕಶವಾಗಿ ಪರಿಶೀಲಿಸದೇ, ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ನೋಟಿಸ್‌ ನೀಡಿದ್ದಾರೆ. ಇದು ಹಿಂದುಳಿದ ವರ್ಗದ ನೇತಾರನನ್ನು ತುಳಿಯುವ ಹುನ್ನಾರ ಎಂದು ಆರೋಪಿಸಿದರು.

ಸಿದ್ದು ತೇಜೋವಧೆಗೆ ಹುನ್ನಾರ:

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ನಡೆಸುತ್ತಿದೆ. ಆದರೆ ತನಿಖಾ ವರದಿ ಬರುವ ಮುನ್ನವೇ ರಾಜ್ಯಪಾಲರು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗೆ ನೋಟಿಸ್‌ ನೀಡುವ ಮೂಲಕ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲು ಹೊರಟಿದ್ದಾರೆ ಎಂದು ದೂರಿದರು.

ಮುಡಾ ಅಕ್ರಮದಲ್ಲಿ ಸಿಎಂ ಭಾಗಿಯಾಗಿದ್ದಾರೆ ಎಂದು ಖಾಸಗಿ ವ್ಯಕ್ತಿ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಸರಿಯಾಗಿ ಪರಿಶೀಲಿಸದೇ ಕೇವಲ ಒಂದೇ ದಿನದಲ್ಲಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿರುವುದು ಖಂಡನೀಯ. ಇದು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಮುಖಂಡರು ಆರೋಪಿಸಿದರು.

ಕಾನೂನು ಹೋರಾಟ:

ಸಿದ್ದರಾಮಯ್ಯ ಹಿಂದುಳಿದ ವರ್ಗದವರ ನಾಯಕರಾಗಿದ್ದು, ನೋಟಿಸ್‌ನಿಂದ ವಿಚಲಿತರಾಗಿಲ್ಲ ಕಾನೂನು ಹೋರಾಟ ನಡೆಸಲಾಗುವುದು. ಸಿದ್ದರಾಮಯ್ಯ ಅವರಿಗೆ ನೋಟಿಸ್‌ ನೀಡಿರುವುದು ಹಿಂದುಳಿದವರಿಗೆ ಮಾಡಿದ ಅವಮಾನ. ಸರ್ಕಾರ ಸುಭದ್ರವಾಗಿದ್ದು, ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ಶೀಘ್ರದಲ್ಲೇ ಗೃಹಲಕ್ಷ್ಮಿ ಯಜನೆಯ 2 ತಿಂಗಳ ಬಾಕಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದರು.

ಭ್ರಷ್ಟಾಚಾರಿಗಳಿಂದ ಪಾದಯಾತ್ರೆ ನಾಟಕ:

ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಗುರುತಿಸಿಕೊಂಡವರೇ ಈಗ ಪಾದಯಾತ್ರೆ ನಾಟಕ ಆಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್‌ನದು ಕೇವಲ ಸುಳ್ಳಿನ ಪಾದಯಾತ್ರೆ, ಪೊಳ್ಳು, ಭ್ರಷ್ಟರ ಪಾದಯಾತ್ರೆ ಎಂದು ಟೀಕಿಸಿದರು.

ನಗರಸಭೆ ಸದಸ್ಯರಾದ ಎಚ್.ಎಸ್.ಶಿವಶಂಕ‌ರ್, ನಾಗರಾಜ್‌, ಆನಂದ್‌, ಅಖಿಲೇಶ್, ಸುರೇಶ್ (ಸುಬ್ಬು), ಶಿವು, ಮುಖಂಡರಾದ ಆಂಜನಮೂರ್ತಿ, ಹೇಮಂತ್ ರಾಜು, ಮೊಬೈಲ್‌ ಮುನಿರಾಜು, ರಾಮು ಮಡಿವಾಳ ಕೃಷ್ಣ, ರವಿ ಸಿದ್ದಪ್ಪ, ರಂಗಸ್ವಾಮಿ, ಹಾಸಿಫುಲ್ಲಾ, ಲಾವಣ್ಯ ನಾಗರಾಜ್, ನೆಲಮಂಗಲದ ಹೊನ್ನಸಿದ್ದಯ್ಯ, ಗಂಗರಾಜು, ನಾಗರಾಜು, ದೇವನಹಳ್ಳಿಯ ಕೊದಂಡಪ್ಪ, ಮಂಜುಳ, ಶಶಿಕಲಾ, ಭರಮಣ್ಣ ಸೇರಿ ನಾಲ್ಕು ತಾಲೂಕಿನ ಮುಖಂಡರು ಭಾಗವಹಿಸಿದ್ದರು.

Share this article